ಬಿಜೆಪಿ ಉತ್ತರ ಪ್ರದೇಶದ ಭವಿಷ್ಯ

ಮಂಗಳವಾರ, 14 ಜೂನ್ 2016 (17:06 IST)
ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಮರಳಿಗಳಿಸಲು ಕಾಂಗ್ರೆಸ್ ನಡೆಸುತ್ತಿರುವ ಪ್ರಯತ್ನ ವ್ಯರ್ಥ, ಈ ರಾಜ್ಯದ ಭವಿಷ್ಯ ಬಿಜೆಪಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 

ಗುಲಾಂ ನಬಿ ಆಜಾದ್ ಅವರಿಗೆ ಉತ್ತರ ಪ್ರದೇಶ್ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಿಸಿರುವುದಕ್ಕೆ ಸಂಬಂಧಿಸಿದಂತೆ ವರದಿಗಾರರು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು ಉತ್ತರಪ್ರದೇಶದಲ್ಲಿ ಪ್ರಸ್ತುತವಲ್ಲದವರ ಬಗ್ಗೆ ಏಕೆ ಮಾತನ್ನಾಡಬೇಕು? ಎಂದು ಮರುಪ್ರಶ್ನೆ ಹಾಕಿದ್ದಾರೆ. 
 
ಅಲಹಾಬಾದ್‌ನಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿದ ಬಿಜೆಪಿ ಕೆಲವು ರಾಜಕೀಯ ನಿರ್ಣಯಗಳನ್ನು ತೆಗೆದುಕೊಂಡಿತು. ಈ ಸಂದರ್ಭದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎಡ ಪಕ್ಷದ ಮೇಲೆ ಆರೋಪದ ಸುರಿಮಳೆಗೈದ ಬಿಜೆಪಿ ಇವೆರಡು ಪಕ್ಷಗಳು ಕೇವಲ ಕ್ಷುಲ್ಲಕ ವಿಷಯಗಳಲ್ಲಿ ಮುಳುಗಿರುತ್ತವೆ ಹೊರತು ಅದರಿಂದ ಹೊರಬರುವುದಿಲ್ಲ. ಇದು ದೇಶದ ಪ್ರಗತಿಗೆ ಮಾರಕವಾಗಿದೆ ಎಂದು ಕಿಡಿಕಾರಿದೆ.
 
"ಬಿಜೆಪಿ ಭಾರತದ ವರ್ತಮಾನ ಪಕ್ಷ- ಇದು ಭಾರತದ ಭವಿಷ್ಯದ ಪಕ್ಷವಾಗಲಿದೆ"- ಎಂಬ ಪ್ರತ್ಯೇಕ ನಿರ್ಣಯವನ್ನು ಸಹ ಸಭೆಯಲ್ಲಿ  ಕೈಗೊಳ್ಳಲಾಯಿತು.
 
ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಸಾಧನೆ "ಅಭೂತಪೂರ್ವ ಮತ್ತು ಅಗಾಧ" ಎಂದು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ