ಕಾಂಗ್ರೆಸ್ ಪಕ್ಷ ಮೋದಿ ಸರಕಾರದ ಉತ್ತಮ ಅಡಳಿತದಿಂದ ಗೊಂದಲದಲ್ಲಿದೆ: ನಕ್ವಿ

ಸೋಮವಾರ, 6 ಜುಲೈ 2015 (18:47 IST)
ಮಾಜಿ ಐಪಿಎಲ್ ಆಯುಕ್ತ ಲಲಿತ್ ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ರಾಜೇ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿರುವುದನ್ನು ಟೀಕಿಸಿದ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ,ಕಾಂಗ್ರೆಸ್ ಪಕ್ಷಕ್ಕೆ ಹಿಟ್ ಆಂಡ್ ರನ್ ಮಾತ್ರ ಉಳಿದಿರುವ ದಾರಿ ಎಂದು ಲೇವಡಿ ಮಾಡಿದ್ದಾರೆ.   
 
ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ನಕ್ವಿ, ದಿಕ್ಕುತೋಚದಂತಾಗಿರುವ ಕಾಂಗ್ರೆಸ್ ಪ್ರತಿ ಗಂಟೆಗೊಮ್ಮೆ ವಿಚಿತ್ರ ಹೇಳಿಕೆ ನೀಡುತ್ತಿದೆ. ಇದರಿಂದಾಗಿ ಸರಕಾರಕ್ಕೆ ಅಥವಾ ಜನತೆಗೆ ಕಾಂಗ್ರೆಸ್ ಹೇಳಿಕೆಯ ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಪ್ರತಿದಿನ ಹಿಟ್ ವಿಕೆಟ್‌ ಆತಂಕಕ್ಕೆ ಒಳಗಾಗುತ್ತಿತ್ತು. ಇದೀಗ ವಿಪಕ್ಷದಲ್ಲಿದ್ದರೂ ನೋಬಾಲ್ ಎಸೆಯುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
 
ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ರಾಜೇ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಮುಂಗಾರು ಅಧಿವೇಶ ನಡೆಯಲು ಬಿಡುವುದಿಲ್ಲ ಎನ್ನುವ ಕಾಂಗ್ರೆಸ್ ಬೆದರಿಕೆಯ ಬಗ್ಗೆ ಉತ್ತರ ನೀಡಿದ ನಕ್ವಿ, ಸರಕಾರ ಸಂಸತ್ತಿನಲ್ಲಿ ಈ ವಿಷಯಗಳ ಬಗ್ಗೆ ಚರ್ಚಿಸಲು ಸಿದ್ದವಿದೆ ಎಂದರು.
 
ಕಾಂಗ್ರೆಸ್ ಪಕ್ಷ ಜಾರುವ ಬಂಡೆಯ ಮೇಲೆ ನಿಂತಿದೆ. ಪ್ರಭಾವಿ ವಿಪಕ್ಷವಾಗಲು ತರಬೇತಿ ಪಡೆಯುವುದು ಅಗತ್ಯವಾಗಿದೆ. ಆದ್ದರಿಂದ ಮೊದಲು ತರಬೇತಿಯನ್ನು ಪಡೆದು ಸಂಸತ್ತಿನಲ್ಲಿ ಚರ್ಚಿಸಲಿ ಎಂದು ಸವಾಲ್ ಹಾಕಿದರು.   
 
ಕಾಂಗ್ರೆಸ್ ಪಕ್ಷ ಬಿಜೆಪಿಯ ಪ್ರಮುಖ ನಾಯಕರ ವಿರುದ್ಧ ಮನಬಂದಂತೆ ಆರೋಪಗಳನ್ನು ಮಾಡುತ್ತಿದೆ. ಸರಕಾರದ ವಿರುದ್ಧ ಯಾವ ಆರೋಪ ಮಾಡಬೇಕು ಎನ್ನುವ ಗೊಂದಲದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ