ಉತ್ತರಾಖಂಡ ವಿಶ್ವಾಸಮತ ಪರೀಕ್ಷೆಯಲ್ಲಿ ರಾವತ್‌ಗೆ ಜಯ: ಬಿಜೆಪಿಗೆ ಮುಖಭಂಗ

ಬುಧವಾರ, 11 ಮೇ 2016 (15:56 IST)
ಉತ್ತರಾಖಂಡದ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಶ್ವಾಸ ಮತ ಯಾಚನೆಯಲ್ಲಿ ಬಹುಮತ ಸಾಧಿಸಿದ್ದು, ರಾಷ್ಟ್ರಪತಿ ಆಡಳಿತವನ್ನು ಶೀಘ್ರದಲ್ಲೇ ರದ್ದು ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂಕೋರ್ಟ್‌ಗೆ ತಿಳಿಸಿರುವುದರಿಂದ ಹರೀಶ್ ರಾವತ್ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಉತ್ತರಾಖಂಡ ಆಡಳಿತ ಚುಕ್ಕಾಣಿಯನ್ನು ಕೈಗೆ ತೆಗೆದುಕೊಳ್ಳುವ ಬಯಕೆಹೊಂದಿದ್ದ ಬಿಜೆಪಿಗೆ ಮುಖಭಂಗವಾಗಿದೆ. 
 
 ಕಾಂಗ್ರೆಸ್‌ನ ರಾವತ್ ಅವರು 61 ಶಾಸಕರ ಪೈಕಿ 33 ಶಾಸಕರ ಬೆಂಬಲ ಪಡೆದಿದ್ದಾರೆ. ಪದಚ್ಯುತ ಮುಖ್ಯಮಂತ್ರಿ ಸದನದಲ್ಲಿ ಇನ್ನೂ ಬಹುಮತ ಹೊಂದಿದ್ದಾರೆಯೇ ಎಂಬ ಖಾತರಿಗೆ ವಿಶ್ವಾಸ ಮತವನ್ನು ಆಯೋಜಿಸಲಾಗಿತ್ತು. 9 ಶಾಸಕರು ಬಂಡಾಯವೆದ್ದಿರುವುದರಿಂದ ರಾವತ್ ಬಹುಮತ ಕಳೆದುಕೊಂಡಿದ್ದಾರೆಂದು ಹೇಳಿದ್ದ ಕೇಂದ್ರಸರ್ಕಾರ ಕಳೆದ ಮಾರ್ಚ್ 27ರಂದು ರಾಷ್ಟ್ರಪತಿ ಆಡಳಿತವನ್ನು ಹೇರಿತ್ತು. 
 
 9 ಬಂಡಾಯ ಕಾಂಗ್ರೆಸ್ ಶಾಸಕರ ಅನರ್ಹತೆ ಹಾಗೇ ಮುಂದುವರಿಯಲಿದ್ದು, ವಿಶ್ವಾಸ ಮತ ಯಾಚನೆಯಲ್ಲಿ ಮತದಾನ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಪ್ರತಿಪಾದಿಸಿದ್ದರಿಂದ ಬಿಜೆಪಿಗೆ ಹಿನ್ನಡೆಯಾಗಿತ್ತು.  ವಿಶ್ವಾಸ ಮತದ ಗೆಲುವನ್ನು ಪ್ರಜಾಪ್ರಭುತ್ವಕ್ಕೆ ಸಂದಿರುವ ಜಯ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಶ್ಲಾಘಿಸಿದ್ದಾರೆ.

ವೆಬ್ದುನಿಯಾವನ್ನು ಓದಿ