ಜಿಎಸ್‌ಟಿ ಮಸೂದೆಗೆ ಕಾಂಗ್ರೆಸ್ ಪಕ್ಷದಿಂದ ಬೆಂಬಲದ ವಿಶ್ವಾಸ: ಅರುಣ್ ಜೇಟ್ಲಿ

ಶನಿವಾರ, 30 ಜನವರಿ 2016 (18:39 IST)
ಮುಂದಿನ ತಿಂಗಳು ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಜಿಎಸ್‌ಟಿ ಮಸೂದೆ ಅಂಗೀಕಾರವಾಗಲು ಕಾಂಗ್ರೆಸ್ ಸಹಕರಿಸುವ ವಿಶ್ವಾಸವಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
 
ಜಿಎಸ್‌ಟಿ ಮಸೂದೆ ಯುಪಿಎ ಸರಕಾರದ ಕೂಸು. ಅದರ ಲಾಭವನ್ನು ಕಾಂಗ್ರೆಸ್‌ ಪಕ್ಷಕ್ಕೆ ನೀಡುತ್ತೇವೆ. ಇದೀಗ ತಮ್ಮದೇ ಮಸೂದೆಯ ವಿರುದ್ಧ ಕಾಂಗ್ರೆಸ್ ತಿರುಗಿ ಬಿದ್ದಿದೆ. ಕಾಂಗ್ರೆಸ್ ಮುಖಂಡರೊಂದಿಗೆ ಮಾತನಾಡಿ ಮಸೂದೆ ಅಂಗೀಕಾರವಾದಲ್ಲಿ ದೇಶದ ಆರ್ಥಿಕತೆಯ ಮೇಲೆ ಆಗುವ ಲಾಭಗಳ ಬಗ್ಗೆ ವಿವರಣೆಯೂ ನೀಡಿದ್ದೇವೆ. ಮುಂದಿನ ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ ದೊರೆಯುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 
 
ಎಕಾನಾಮಿಕ್ಸ್ ಟೈಮ್ಸ್ ಗ್ಲೋಬಲ್ ಬಿಜಿನೆಸ್ ಶೃಂಗಸಭೆಯಲ್ಲಿ ಮಾತನಾಡಿದ ಜೇಟ್ಲಿ, ಕಾಂಗ್ರೆಸ್ ಪಕ್ಷ ಮೂರು ಅಂಶಗಳಿಗೆ ತಿದ್ದುಪಡಿ ತರಲು ಹೇಳಿದೆ ಎಂದು ತಿಳಿಸಿದರು.
 
ಯುಪಿಎ ಮಿತ್ರಪಕ್ಷಗಳಾದ ಆರ್‌ಜೆಡಿ, ಎನ್‌ಸಿಪಿ ಮತ್ತು ಜೆಡಿಯು ಕೂಡಾ ಜಿಎಸ್‌ಟಿ ಮಸೂದೆಗೆ ಬೆಂಬಲ ಸೂಚಿಸಿವೆ. ಕಾಂಗ್ರೆಸ್ ಅಡಳಿತವಿರುವ ರಾಜ್ಯಗಳು ಕೂಡಾ ಜಿಎಸ್‌ಟಿ ಮಸೂದೆಗೆ ಬೆಂಬಲ ನೀಡಲಿವೆ ಎಂದು ಸಚಿವ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ