ಹಿರಿಯ ಸಂಶೋಧಕ ಕಲಬುರ್ಗಿ ಹತ್ಯೆ: ಆರೆಸ್ಸೆಸ್ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಗುರುವಾರ, 3 ಸೆಪ್ಟಂಬರ್ 2015 (16:16 IST)
ಹಿರಿಯ ಸಾಹಿತಿ, ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆಗೆ ಆರೆಸ್ಸೆಸ್ ಗುರಿಯಾಗಿಸಿ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
 
ಗೋವಿಂದ್ ಪನಸಾರೆ ಮತ್ತು ನರೇಂದ್ರ ದಾಭೋಳ್ಕರ್ ಮತ್ತು ಕಲಬುರ್ಗಿಯವರ ಹತ್ಯೆ ಒಂದೇ ತೆರನಾಗಿ ನಡೆದಿದ್ದು ತರ್ಕಾಧಾರಿತ ವಾದ ಮಂಡಿಸುವ ನಾಯಕರನ್ನು ಮುಗಿಸುವ ಸಂಚು ಇದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.  
 
ಕಾಂಗ್ರೆಸ್ ಪಕ್ಷದ ವಕ್ತಾರರಾದ ರಣದೀಪ್ ಸುರ್ಜೆವಾಲಾ ಮಾತನಾಡಿ, ಆರೆಸ್ಸೆಸ್‌ ಸಹೋದರಿ ಸಂಸ್ಥೆಯಾದ ಬಜರಂಗ್‌ ದಳ ನಾಯಕರು ಸಂಶಯದ ಸುಳಿಯಲ್ಲಿ ಸಿಲುಕಿದ್ದಾರೆ ಎಂದು ಹೇಳಿದ್ದಾರೆ,
 
ಬಜರಂಗ್ ದಳ ಕಾರ್ಯಕರ್ತನಾದ ಭುವಿತ್ ಶೆಟ್ಟಿ, ಕಲಬುರ್ಗಿ ಹತ್ಯೆಯ ನಂತರ ಮತ್ತೊಬ್ಬ ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಮುಂದಿನ ಟಾರ್ಗೆಟ್ ಎಂದು ಟ್ವೀಟ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
 
ಆರೆಸ್ಸೆಸ್ ಸಂಸ್ಥೆ ತನ್ನ ಅಭಿಪ್ರಾಯಗಳನ್ನು ವಿರೋಧಿಸುವ ಯಾರೇ ಅಗಲಿ ಅವರನ್ನು ಹತ್ಯೆ ಮಾಡುವ ಹಿಂಸಾಚಾರದಲ್ಲಿ ತೊಡಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಹಂಪಿ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ 77 ವರ್ಷವಯಸ್ಸಿನ ಕಲಬುರ್ಗಿಯವರನ್ನು ಧಾರವಾಡದ ಕಲ್ಯಾಣ ನಗರದಲ್ಲಿರುವ ಅವರ ನಿವಾಸದಲ್ಲಿಯೇ ರವಿವಾರದಂದು ಹತ್ಯೆ ಮಾಡಲಾಗಿತ್ತು. 
 
ವಾಕ್‌ಸ್ವಾತಂತ್ರವನ್ನು ಬಗ್ಗುಬಡಿಯುವ ಪ್ರತ್ಯೇಕತಾವಾದಿ ಸಂಘಟನೆಗಳನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. 
 
ವಿಚಾರವಾದಿಗಳು ಮೂಢನಂಬಿಕೆಯನ್ನು ವಿರೋಧಿಸಿ ವೈಜ್ಞಾನಿಕ ವಿಷಯಗಳನ್ನು ಮಂಡಿಸುತ್ತಿರುವುದು ಆರೆಸ್ಸೆಸ್ ಸಂಸ್ಥೆಗೆ ನುಂಗಲಾರದ ತುತ್ತಾಗಿದ್ದರಿಂದ ವಿಚಾರವಾದಿಗಳ ಹತ್ಯೆಗೆ ಮುನ್ನುಡಿ ಬರೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ