ಕೃಷಿ ಸಚಿವರ ಹೇಳಿಕೆಗೆ ಪ್ರಧಾನಿ ಮೋದಿ ಕ್ಷಮೆಯಾಚಿಸಲಿ: ಕಾಂಗ್ರೆಸ್

ಶನಿವಾರ, 25 ಜುಲೈ 2015 (15:39 IST)
ದೇಶದ ರೈತರ ಸಾವಿಗೆ ಡ್ರಗ್ಸ್, ಪ್ರೇಮ ಪ್ರಕರಣ, ವರದಕ್ಷಿಣೆ ಕಾರಣವೇ ಹೊರತು ಸಾಲವಲ್ಲ ಎಂದು ಕೇಂದ್ರ ಕೃಷಿ ಖಾತೆ ಸಚಿವ ರಾಧಾ ಮೋಹನ್ ಸಿಂಗ್ ನೀಡಿದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ಮುಖಂಡ ಪ್ರಮೋದ್ ತಿವಾರಿ ಒತ್ತಾಯಿಸಿದ್ದಾರೆ. 
 
ರೈತರ ಆತ್ಮಹತ್ಯೆಗೆ ಪ್ರೇಮ ಪ್ರಕರಣಗಳು ಕಾರಣ ಎಂದು ಹೇಳಿಕೆ ನೀಡಿರುವುದು ದೇಶಕ್ಕೆ ನಾಚಿಕೆ ತರುವಂತಹ ಸಂಗತಿ. ಬಿಹಾರ್ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿರುವ ಪ್ರಧಾನಿ ಮೋದಿ ಹಾಗೂ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಬಹಿರಂಗವಾಗಿ ಸಾರ್ವಜನಿಕರ ಮುಂದೆ ಕ್ಷಮೆಯಾಚಿಸಲಿ ಎಂದು ಗುಡುಗಿದ್ದಾರೆ.
 
ಕಳೆದ ವರ್ಷ ಮಳೆಯ ಕೊರತೆಯಿಂದಾಗಿ ರೈತರು ಸಂಕಷ್ಟದಲ್ಲಿದ್ದರೂ ಕೇಂದ್ರ ಸರಕಾರ ಯಾವುದೇ ನೆರವು ನೀಡಿಲ್ಲ. ಬಡ ರೈತರ ಮಕ್ಕಳಿಗೆ ಶಿಕ್ಷಣ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ರೈತರು ಜೀವನ ಸಾಗಿಸಲು ಕಷ್ಟವಾಗಿ ಆತ್ಮಹತ್ಯೆಗೆ ಮೊರೆಹೋಗುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ನೀಡಿರುವ ಹೇಳಿಕೆ ಬಿಜೆಪಿ ಸರಕಾರಕ್ಕೆ ನಾಚಿಕೆ ತರುವ ಸಂಗತಿ ಎಂದರು. 
 
ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಕೃಷಿ ಸಚಿವರ ಹೇಳಿಕೆಯ ಬಗ್ಗೆ ಕೇಂದ್ರ ಸರಕಾರ ಉತ್ತರ ನೀಡಬೇಕು. ಪ್ರಧಾನಿ ಮೋದಿ ಕ್ಷಮೆಯಾಚಿಸುವಂತೆ ಒತ್ತಾಯಿಸುತ್ತೇವೆ ಎಂದು ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ