ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಧರಣಿ

ಗುರುವಾರ, 2 ಏಪ್ರಿಲ್ 2015 (18:00 IST)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾರವರ ವಿರುದ್ಧ ವರ್ಣ ತಾರತಮ್ಯದ ಹೇಳಿಕೆ ನೀಡಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಗೃಹದ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಗುಂಪು ಪ್ರತಿಭಟನೆ ಕೈಗೊಂಡಿತು. 
 
ಬಿಜೆಪಿ, ಪ್ರಧಾನಿ ಮೋದಿ ಮತ್ತು ಸಿಂಗ್ ವಿರುದ್ಧ ಘೋಷಣೆ ಕೂಗುತ್ತ  ವಿಠ್ಠಲ್ ಭಾಯಿ ಪಟೇಲ್ ಹೌಸ್ ಸಂಕೀರ್ಣದ ಮುಂದೆ ನೆರೆದ ಕಾಂಗ್ರೆಸ್ ಕಾರ್ಯಕರ್ತರು ಸಿಂಗ್ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದರು. ಆದರೆ  ಸಿಂಗ್ ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ತೆರಳಿದ್ದರು. 
 
ಸಿಂಗ್ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ಶೋಭಾ ಓಝಾ," ಸಚಿವರಾಗಿ ಇಂತಹ ಭಾಷೆ ಬಳಸಿರುವುದು ಸ್ವೀಕಾರಾರ್ಹವಲ್ಲ, ಇದಕ್ಕೆ ಪ್ರತಿಯಾಗಿ ಗಿರಿರಾಜ್ ರಾಜೀನಾಮೆಯನ್ನು ಹೊರತು ಪಡಿಸಿ ನಾವೇನನ್ನು ಬಯಸುವುದಿಲ್ಲ", ಎಂದಿದ್ದಾರೆ. 
 
ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಧರಣಿ ನಿರತರಿಂದ ಬ್ಯಾನರ್ಸ್ ವಶಪಡಿಸಿಕೊಂಡರು ಮತ್ತು ಸಿಂಗ್ ಬೊಂಬೆ ಸುಡುವುದನ್ನು ತಡೆದರು. 
 
ಸೋನಿಯಾ ಗಾಂಧಿಯವರ ಮೈಬಣ್ಣ ಅವರನ್ನು ಕಾಂಗ್ರೆಸ್ ಅಧ್ಯಕ್ಷಳನ್ನಾಗಿಸಿದೆ. ರಾಜೀವ್ ನೈಜಿರಿಯನ್ ಮೂಲದ ಕಪ್ಪು ಮಹಿಳೆಯನ್ನು ಮದುವೆಯಾಗಿದ್ದರೆ ಅವರನ್ನು ಸಹ ಕಾಂಗ್ರೆಸ್ ತಮ್ಮ ನಾಯಕಿಯನ್ನಾಗಿ ಒಪ್ಪಿಕೊಳ್ಳುತ್ತಿತ್ತೆ ಎಂದು ಕೇಂದ್ರ ಮಂತ್ರಿ ಗಿರಿರಾಜ್ ಸಿಂಗ್ ಮಂಗಳವಾರ ಪತ್ರಕರ್ತರ ಬಳಿ ಹೇಳಿದ್ದರು. ಇದಕ್ಕೆ ದೇಶಾದ್ಯಂತ ವಿರೋಧ ಪಕ್ಷಗಳು ತೀವೃ ಖಂಡನೆ ವ್ಯಕ್ತಪಡಿಸಿವೆ. 

ವೆಬ್ದುನಿಯಾವನ್ನು ಓದಿ