ಸರಕಾರಕ್ಕೆ ಕೆಟ್ಟ ಹೆಸರು ತರಲು ಕೋಮುವಾದಿಗಳ ಸಂಚು: ಅಖಿಲೇಶ್ ಯಾದವ್

ಮಂಗಳವಾರ, 6 ಅಕ್ಟೋಬರ್ 2015 (16:46 IST)
ಗೋಮಾಂಸ ಸೇವನೆ ಮಾಡಿದ್ದಾನೆ ಎನ್ನುವ ಉಹಾಪೋಹಗಳ ಹಿನ್ನೆಲೆಯಲ್ಲಿ ದಾದ್ರಿ ಹತ್ಯೆ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕೆಲ ವಿಚ್ಚಿದ್ರಕಾರಿ, ಕೋಮುವಾದಿ ಶಕ್ತಿಗಳು ಸರಕಾರಕ್ಕೆ ಕೆಟ್ಟ ಹೆಸರನ್ನು ತರುವ ರಾಜಕೀಯ ಸಂಚು ನಡೆಸುತ್ತಿವೆ ಎಂದು ಕಿಡಿಕಾರಿದ್ದಾರೆ.
 
ರಾಜ್ಯದ ಅಭಿವೃದ್ಧಿಯನ್ನು ಮರೆಮಾಚಲು ಕೆಲ ಕೋಮುವಾದಿ ಶಕ್ತಿಗಳು ಹಿಂದು, ಮುಸ್ಲಿಮರ ಮಧ್ಯೆ ಬಿಕ್ಕಟ್ಟು ಸೃಷ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಷಡ್ಯಂತ್ರ ರೂಪಿಸುತ್ತಿವೆ ಎಂದು ಹೇಳಿದ್ದಾರೆ.   
 
ರಾಜ್ಯದಲ್ಲಿ ಕೋಮುಗಲಭೆ ಹಬ್ಬಿಸಲು ಸಂಚು ನಡೆದಿದೆ. ಇಂತಹ ಸಂಚು ವಿಫಲಗೊಳಿಸಲು ನಾವು ಎಚ್ಚರಿಕೆಯಿಂದಿರಬೇಕು ಎಂದು ಮಧ್ಯಮ, ಸಣ್ಣ ಮತ್ತು ಮೈಕ್ರೋ ಎಂಟರ್‌ಪ್ರೈಸೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ಅಖಿಲೇಶ್ ಯಾದವ್ ಜನತೆಗೆ ಮನವಿ ಮಾಡಿದ್ದಾರೆ.
 
ಇವತ್ತು ವಿಶ್ವ ಅಭಿವೃದ್ಧಿಪಥದತ್ತ ಸಾಗುತ್ತಿದ್ದರೆ ಕೆಲ ದುರ್ಜನ ಶಕ್ತಿಗಳು ಕೋಮುವಾದವನ್ನು ಬಳಸಿಕೊಂಡು ರಾಜಕೀಯವಾಗಿ ರಾಜ್ಯ ಮತ್ತು ದೇಶದ ಅಭಿವೃದ್ಧಿಯನ್ನು ತಡೆಯಲು ಪ್ರಯತ್ನಿಸುತ್ತಿವೆ ಎಂದರು.
 
ವಿಚ್ಚಿದ್ರಕಾರಿ ಶಕ್ತಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸರಕಾರಕ್ಕೆ ಕೆಟ್ಟ ಹೆಸರು ಪ್ರಯತ್ನಿಸುತ್ತಿವೆ. ಸಮಾಜದ ಎಲ್ಲಾ ವರ್ಗಗಳಿಗೆ ಹಾನಿಯಾಗುವಂತಹ ವಿಷಯಗಳನ್ನು ಚರ್ಚಾ ವಿಷಯವನ್ನಾಗಿ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ