ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತ್ರ ಭ್ರಷ್ಟಾಚಾರದಲ್ಲಿ ಇಳಿಕೆ: ಕಾಂಗ್ರೆಸ್ ಮುಖಂಡ

ಮಂಗಳವಾರ, 2 ಫೆಬ್ರವರಿ 2016 (14:55 IST)
ದೇಶದಲ್ಲಿ ಅಸಹಿಷ್ಣುತೆಯ ವಾತಾವರಣವಿಲ್ಲ. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಭ್ರಷ್ಟಾಚಾರದಲ್ಲಿ ಇಳಿಮುಖವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ಮುಖಂಡ ಬೇನಿ ಪ್ರಸಾದ್ ವರ್ಮಾ ಹೇಳಿಕೆ ನೀಡಿರುವುದು ಕಾಂಗ್ರೆಸ್ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
 
ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಉತ್ತರಪ್ರದೇಶದಲ್ಲಿ ಭ್ರಷ್ಟಾಚಾರದಲ್ಲಿ ಹೆಚ್ಚಳವಾಗಿದ್ದರೂ ದೇಶದಲ್ಲಿ ಭ್ರಷ್ಟಾಚಾರ ಇಳಿಮುಖವಾಗಿರುವುದು ಕಂಡು ಬಂದಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. 
 
ದೇಶದಲ್ಲಿ ಅಸಹಿಷ್ಣುತೆಯ ವಾತಾವರಣವಿಲ್ಲ ಹಿಂದೆ ಇದಕ್ಕಿಂತ ಹೆಚ್ಚು ಅಸಹಿಷ್ಣುತೆಯಿತ್ತು. ಆದರೆ, ದೇಶದಲ್ಲಿ ಸಾಮಾಜಿಕ ನ್ಯಾಯದ ಕೊರತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಅನಧಿಕೃತವಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿರುವುದು ಧನಾತ್ಮಕ ಹೆಜ್ಜೆಯಾಗಿದೆ. ಮೋದಿ ವಿದೇಶ ಪ್ರವಾಸಗಳನ್ನು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಇದರಿಂದ ಕೈಗಾರಿಕೋದ್ಯಮಕ್ಕೆ ನೆರವಾಗಿ ನಿರುದ್ಯೋಗ ಸಮಸ್ಯೆಯನ್ನು ಕಡಿಮೆಗೊಳಿಸಲು ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.  
 
ಮುಂಬರುವ ಆಸ್ಸಾಂ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ ಅಲ್ಪಮಟ್ಟಿನ ಸಾಧನೆ ಮಾಡಬಹುದು. ಆದರೆ, ಪಂಜಾಬ್‌ನಲ್ಲಿ ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳು ಸರಕಾರ ರಚಿಸಲಿವೆ ಎಂದರು.
 
ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ರಾಜ್ಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಕಳವಳಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್ ಮುಖಂಡ ಬೇನಿಪ್ರಸಾದ್ ವರ್ಮಾ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ