ಡಿ.ಕೆ. ರವಿ ಅನುಮಾನಾಸ್ಪದ ಸಾವು: ಏಮ್ಸ್ ಮುಖ್ಯಸ್ಥರಿಂದು ಬೆಂಗಳೂರಿಗೆ

ಭಾನುವಾರ, 2 ಆಗಸ್ಟ್ 2015 (13:33 IST)
ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ  ಅವರ  ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಏಮ್ಸ್ ಮುಖ್ಯಸ್ಥ ಸುಧೀರ್ ಗುಪ್ತಾ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. 
ಸದ್ಯ ಸಿಬಿಐ ಈ ಕುರಿತು ತನಿಖೆ ನಡೆಸುತ್ತಿದೆ. ಆದರೆ ರವಿಯವರದ್ದು ಆತ್ಮಹತ್ಯೆಯೋ, ಕೊಲೆಯೋ ಎಂಬ ತೀರ್ಮಾನಕ್ಕೆ ಸಿಬಿಐ ಅಧಿಕಾರಿಗಳಿನ್ನು ಬಂದಿಲ್ಲ. 
 
ಡಿ.ಕೆ. ರವಿ ಮರಣೋತ್ತರ ಪರೀಕ್ಷಾ ವರದಿ, ಅವರ ಸಾವಿನ ಹಿಂದಿನ ಸಂದರ್ಭಗಳು ಹಾಗೂ ಸಿಬಿಐ ಒದಗಿಸಿದ ತನಿಖಾ ಮಾಹಿತಿ ಪರಾಮರ್ಶೆ ನಂತರ ಏಮ್ಸ್ ವೈದ್ಯರ ತಂಡ ಇದು ಆತ್ಮಹತ್ಯೆ ಎಂದು ಲಿಖಿತ ರೂಪದಲ್ಲಿ ತನ್ನ ಅಭಿಪ್ರಾಯ ತಿಳಿಸಿತ್ತು. ವಿಶೇಷವೆಂದರೆ, ವೈದ್ಯರ ಈ ಅಭಿಮತ ಬೆಂಗಳೂರು ಮತ್ತು ಹೈದರಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯಗಳ ಎರಡೂ ಪ್ರತ್ಯೇಕ ವರದಿಗಳಿಗೂ ತಾಳೆಯಾಗುವಂತಿದೆ. ರವಿ ಸಾವಿಗೆ ಸಾವಿಗೆ ಉಸಿರುಗಟ್ಟುವಿಕೆ ಕಾರಣ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿತ್ತು.
 
ಆದರೆ ಏಮ್ಸ್ ವರದಿ ಮೇಲೆ ಸಿಬಿಐ ತಂಡ ಹಲವು ಪ್ರಶ್ನೆಗಳನ್ನಿಟ್ಟುಕೊಂಡು ಕುಳಿತಿದೆ. ಅವೆಲ್ಲ ಪ್ರಶ್ನಗಳಿಗೆ ಉತ್ತರಿಸಲು ಗುಪ್ತಾ ಪ್ರಯತ್ನಿಸಲಿದ್ದಾರೆ. 
 
ರವಿಯವರು ಶವವಾಗಿ ಪತ್ತೆಯಾದ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಲಿರುವ ಅವರು ಅವರು ಶವ ಪತ್ತೆಯಾಗಿದ್ದ ಫ್ಯಾನ್ ಒಬ್ಬ ಮನುಷ್ಯನ ಭಾರವನ್ನು ತಡೆದುಕೊಳ್ಳುವಂತ ಸಾಮರ್ಥ್ಯ ಹೊಂದಿತ್ತೆ, ಅವರ ಶವದ ಬಳಿ ಕುರ್ಚಿ ಇತ್ತೆ ಎಂಬುದನ್ನು ಸೇರಿದಂತೆ ಹಲವು ವಿಷಯಗಳನ್ನು ಪರಿಶೀಲಿಸಲಿದ್ದಾರೆ.
 
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಭೇಟಿಯಾಗಲಿದ್ದಾರೆ ಮತ್ತು ಲಭ್ಯವಿರುವ ವೀಡಿಯೋವನ್ನು ಪರಶೀಲಿಸಲಿದ್ದಾರೆ.

ರವಿಯವರದು ಉಸಿರಾಟದ ಕೊರತೆಯಿಂದ ಉಂಟಾದ ಸಾವು ಎಂದು ಮರಣೋತ್ತರ ಪರೀಕ್ಷೆಯಲ್ಲಿ ವರದಿಯಾಗಿದೆ. ಆದರೆ ಅವರ ಕುತ್ತಿಗೆಯಲ್ಲಿ ಗಾಯದ ಗುರುತಿತ್ತು. ಅದು ಅವರು ಬಿಗಿದುಕೊಂಡಿದ್ದ ಬಟ್ಟೆಯಿಂದಾದ ಗಾಯವೇ ಅಥವಾ ಹಲ್ಲೆಯಿಂದಾದ ಗಾಯವೇ ಎಂಬುದರ ಬಗ್ಗೆ ಕೂಡ  ಅವರು ಪರಿಶೀಲಿಸಲಿದ್ದು, ಮರಣೋತ್ತರ ಪರೀಕ್ಷೆ  ವರದಿ ನೀಡಿದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಂದ ಕೂಡ ಮಾಹಿತಿ ಪಡೆಯಲಿದ್ದಾರೆ. 

ವೆಬ್ದುನಿಯಾವನ್ನು ಓದಿ