ದಲಿತರು ಸಬಲರಾದಲ್ಲಿ ಮಾತ್ರ ಅಧಿಕಾರ: ಜಾರಕಿಹೊಳಿ

ಭಾನುವಾರ, 1 ಮಾರ್ಚ್ 2015 (12:12 IST)
: "ದಲಿತರು ಬಂದರು ದಾರಿ ಬಿಡಿ, ದಲಿತರ ಕೈಗೆ ಅಧಿಕಾರ ಕೊಡಿ ಎಂದರೆ ಯಾರೂ ಕೊಡುವುದಿಲ್ಲ. ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲರಾದರೆ, ದಾರಿಯನ್ನೂ ಬಿಡುತ್ತಾರೆ. ಅಧಿಕಾರವನ್ನೂ ಕೊಡುತ್ತಾರೆ...'
 
- ಅಬಕಾರಿ ಸಚಿವ ಸತೀಶ್‌ ಜಾರಕಿಹೊಳಿ ದಲಿತ ಸಮುದಾಯಕ್ಕೆ ಹೇಳಿದ ಕಿವಿಮಾತು ಇದು. ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ಜ್ಯೋತಿ ಬಾಫ‌ುಲೆ ಅವರ 188ನೇ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್‌ ರಾಜ್ಯಮಟ್ಟದ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
 
ಕೋಲಾರದ ತಂಡವೊಂದು "ದಲಿತರು ಬಂದರು ದಾರಿ ಬಿಡಿ...' ಎಂದು ಕ್ರಾಂತಿಗೀತೆ ಹಾಡಿದರು. ನಂತರ ಮಾತಿಗಿಳಿದ ಸಚಿವ ಜಾರಕಿಹೊಳಿ, ಹಾಡು ಚೆನ್ನಾಗಿದೆ. ಆದರೆ ಹೀಗೆ ಹಾಡಿದ ತಕ್ಷಣ ಯಾರೂ ನಮಗೆ ದಾರಿ ಬಿಡುವುದಿಲ್ಲ. ಅಧಿಕಾರವನ್ನೂ ಕೊಡುವುದಿಲ್ಲ. ನಾವು ಉದ್ಯಮಿಗಳು, ಅಕ್ಷರಸ್ಥರು ಆಗಬೇಕು. ಆ ಮೂಲಕ ಸಂಘಟಿತರಾಗಬೇಕು. ಅಂದಾಗ, ನ್ಯಾಯ ಸಿಗುತ್ತದೆ ಎಂದರು.
 
ಅಯ್ಯಪ್ಪ ಸ್ವಾಮಿ ಜ್ಯೋತಿ ಹಿಂದೆ ಬೀಳದೆ, ಬುದ್ಧ, ಬಸವ, ಅಂಬೇಡ್ಕರ್‌, ಸಾಹು ಮಹಾರಾಜ್‌ ಹಾಗೂ ಫ‌ುಲೆಯಂತಹ ಜ್ಯೋತಿಗಳ ಹಿಂದೆ ಸಾಗಬೇಕು. ಸಾಲ ಮಾಡಿ ದೇವರ ಹುಂಡಿಗೆ ಹಾಕುವುದು, ಸತ್ಯನಾರಾಯಣ ಪೂಜೆ ಮಾಡುವುದಕ್ಕಿಂತ ಮಕ್ಕಳ ಶಿಕ್ಷಣಕ್ಕೆ ಹಣ ವಿನಿಯೋಗಿಸಬೇಕು ಎಂದು ಸಲಹೆ ಮಾಡಿದರು.
 
ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ದಲಿತ ಸಂಘರ್ಷ ಸಮಿತಿ(ಭೀಮವಾದ)ಯ ರಾಜ್ಯ ಸಂಚಾಲಕ ಆರ್‌. ಮೋಹನ್‌ರಾಜ್‌, ಡಾ.ಬಿ.ಆರ್‌.ಅಂಬೇಡ್ಕರ್‌ ದಲಿತರಿಗೆ ನ್ಯಾಯ ಒದಗಿಸಲು ಸಂವಿಧಾನ ರಚಿಸಿ ಮೀಸಲಾತಿ ಕಲ್ಪಿಸಿದರು. ಆದರೆ, ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣದಿಂದ ಮೀಸಲಾತಿ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
 
ರಾಜ್ಯದ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿ ನಿಲಯಗಳಲ್ಲಿ 1.50 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈವರೆಗೆ ಅವರಿಗೆ ಸರ್ಕಾರ ಸಮವಸ್ತ್ರ ಸೇರಿ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹಿನ್ನಡೆ ಉಂಟಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ವಿಧಾನ ಪರಿಷತ್‌ ಸದಸ್ಯೆ ತಾರಾ ಅನುರಾಧ, ಬಿಎಸ್‌ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ, ಎಸ್‌ಡಿಪಿಐ ಅಬ್ದುಲ್‌ ಮಜಿದ್‌ ಕೊಡ್ಲಿಪೇಟೆ, ಐಸಿಯುಎಫ್ ಅಧ್ಯಕ್ಷ ಟಿ.ಜೆ. ಅಬ್ರಹಾಂ, ಶೂದ್ರ ಸೇನೆ ರಾಜ್ಯ ಸಂಚಾಲಕ ಮುರುಳೀಧರ್‌ ಹಾಲಪ್ಪ, ಪ್ರಾಧ್ಯಾಪಕ ಡಾ. ಏಸುದಾಸ್‌ ಮತ್ತಿತರರು ಉಪಸ್ಥಿತರಿದ್ದರು.
 

ವೆಬ್ದುನಿಯಾವನ್ನು ಓದಿ