ದೀಪಾವಳಿ ಹಬ್ಬದೊಳಗೆ ಚೋಟಾ ರಾಜನ್ ಫಿನಿಶ್ ಎಂದ ಚೋಟಾ ಶಕೀಲ್

ಬುಧವಾರ, 28 ಅಕ್ಟೋಬರ್ 2015 (16:39 IST)
ಇಂಡೋನೇಷ್ಯಾ ಪೊಲೀಸರ ಬಲೆಗೆ ಬಿದ್ದ ಭೂಗತ ದೊರೆ ಚೋಟಾ ರಾಜನ್‌ನನ್ನು ದೀಪಾವಳಿ ಹಬ್ಬದೊಳಗೆ ಹತ್ಯೆ ಮಾಡುವುದಾಗಿ ದಾವೂದ್ ಇಬ್ರಾಹಿಂ ಸಹಚರ ಚೋಟಾ ಶಕೀಲ್ ಪ್ರತಿಜ್ಞೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಕಳೆದ 1993ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟದ ನಂತರ ದಾವೂದ್ ಇಬ್ರಾಹಿಂ ಗ್ಯಾಂಗ್‌ ತೊರೆದು ಪ್ರತ್ಯೇಕ ತಂಡ ಕಟ್ಟಿದ್ದ ಚೋಟಾ ರಾಜನ್, ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವುದು ಪೊಲೀಸರಿಗೆ ಶರಣಾಗಲು ಮೂಲಕಾರಣವಾಗಿದೆ ಎನ್ನಲಾಗಿದೆ. ಗ್ಯಾಂಗ್‌ನಿಂದ ಬೇರೆಯಾದ ನಂತರದಿಂದ ರಾಜನ್ ಹತ್ಯೆಗೆ ಶಕೀಲ್ ಪ್ರಯತ್ನಿಸುತ್ತಿದ್ದಾನೆ ಎನ್ನಲಾಗಿದೆ. 
 
ಎರಡು ತಿಂಗಳುಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದ ರಾಜನ್ ಮೇಲೆ, ಶಕೀಲ್ ಬೆಂಬಲಿಗರು ಹತ್ಯೆಯತ್ನ ಮಾಡಿದ್ದರು. ಆದರೆ, ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡ ರಾಜನ್ ಗಾಯಾಳುವಾಗಿ ಆಸ್ಪತ್ರೆಗೆ ದಾಖಲಾಗಿದ್ದ.
 
ಕಳೆದ 2003ರಲ್ಲಿ ಮುಂಬೈನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಡಿ ಕಂಪೆನಿಯನ್ನು ಮುನ್ನಡೆಸುತ್ತಿದ್ದ ಶರದ್ ಶೆಟ್ಟಿಯನ್ನು ಚೋಟಾ ರಾಜನ್ ಆದೇಶದ ಮೇರೆಗೆ ಆತನ ಸಹಚರ ಅನಿಲ್ ರಿತೇಶ್ವರ್ ಹತ್ಯೆ ಮಾಡಿದ್ದನು. ಶೆಟ್ಟಿಯ ಹತ್ಯೆಯಿಂದ ಆಕ್ರೋಶಗೊಂಡ ದಾವುದ್ ರಾಜನ್ ಹತ್ಯೆಗೆ ಆದೇಶ ನೀಡಿದ್ದ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ