20 ವರ್ಷದ ಹಿಂದೆ ಶರಣಾಗ ಬಯಸಿದ್ದ ದಾವೂದ್; ಆದರೆ!

ಶನಿವಾರ, 2 ಮೇ 2015 (16:07 IST)
300ಕ್ಕೂ ಹೆಚ್ಚು ಅಮಾಯಕರ ಸಾವಿಗೆ ಕಾರಣವಾದ 1993ರ ಮುಂಬಯಿ ಸರಣಿ ಬಾಂಬ್‌ ಸ್ಫೋಟದ ಪ್ರಮುಖ ಆರೋಪಿ, ಮೋಸ್ಟ್ ವಾಟೆಂಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ಕುರಿತಂತೆ ಸ್ಪೋಟಕ ಸಂಗತಿಯೊಂದು ಹೊರಬಿದ್ದಿದೆ. "ದಾವೂದ್ 1994ರಲ್ಲಿಯೇ ಭಾರತದ ಪೊಲೀಸರಿಗೆ ಶರಣಾಗಲು ಬಯಸಿದ್ದ. ಆದರೆ ಸರಕಾರ ಅದಕ್ಕೊಪ್ಪಲಿಲ್ಲ. ಸಿಬಿಐ ಹಿರಿಯ ಅಧಿಕಾರಿಗಳು ಈ ವಿಷಯದಲ್ಲಿ ಮುಂದುವರೆಯದಂತೆ ನನ್ನನ್ನು ತಡೆದರು", ಎನ್ನುವುದರ ಮೂಲಕ ದೆಹಲಿಯ ನಿವೃತ್ತ ಕಮಿಷನರ್ ನೀರಜ್ ಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ. 

ಇಂಗ್ಲಿಷ್‌ ಪತ್ರಿಕೆಯೊಂದರ ಜತೆ ಮಾತನಾಡುತ್ತಿದ್ದ ಕುಮಾರ್, "1994ರ ಜೂನ್‌ನಲ್ಲಿ ತಾನು ಮೂರು ಬಾರಿ ದಾವೂದ್ ಜತೆ ಮಾತುಕತೆ ನಡೆಸಿದ್ದೆ. ಆ ಸಂದರ್ಭದಲ್ಲಿ ಆತ ಭಯಗ್ರಸ್ತನಾಗಿದ್ದ ಮತ್ತು ಶರಣಾಗುವ ಇಂಗಿತ ವ್ಯಕ್ತಪಡಿಸಿದ್ದ. ಆದರೆ ತಾನು ಭಾರತಕ್ಕೆ ಹಿಂತಿರುಗಿದರೆ ನನ್ನ ವಿರೋಧಿ ಗ್ಯಾಂಗ್‌ನವರು ಹತ್ಯೆ ಮಾಡಬಹುದು ಎಂಬ ಆತಂಕವೂ ಆತನಿಗಿತ್ತು. ಅದಕ್ಕೆ ನಾನು ನಿನ್ನ ಪ್ರಾಣರಕ್ಷಣೆ ಹೊಣೆ ಸಿಬಿಐನದ್ದು. ಆ ಬಗ್ಗೆ ಚಿಂತೆ ಬೇಡ ಎಂದು ವಾಗ್ದಾನ ಮಾಡಿದ್ದೆ. ಆದರೆ ಸ್ವತಃ ಸಿಬಿಐನ ಉನ್ನತಾಧಿಕಾರಿಗಳು ಈ ಶರಣಾಗತಿಗೆ ಒಪ್ಪಿಗೆ ನೀಡಲಿಲ್ಲ. ಹೀಗಾಗಿ  ನಾನು ಸಹ ಈ ಮಾತುಕತೆಯನ್ನು ಮುಂದುವರೆಸಲಿಲ್ಲ", ಎಂದು ಕುಮಾರ್ ಹೇಳಿದ್ದಾರೆ. 
 
ಆದರೆ ನೀರಜ್ ಕುಮಾರ್ ಅವರ ಹೇಳಿಕೆಯನ್ನು ಸಿಬಿಐನ ನಿವೃತ್ತ ಮುಖ್ಯಸ್ಥ ವಿಜಯ್ ರಾಮರಾವ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. "ದಾವುದ್ ಅಂತಹ ಯಾವುದೇ ಪ್ರಸ್ತಾವನೆಗಳು ದಾವೂದ್ ಮಾಡಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಆತ ಶರಣಾಗತನಾಗುವುದಾಗಿ ಹೇಳಿದ್ದಿದ್ದರೆ ಕೇಂದ್ರ ಸರ್ಕಾರ ಹಾಗೂ ಸಿಬಿಐ ಯಾವ ಕಾರಣಕ್ಕೂ ನಿರಾಕರಿಸುತ್ತಿರಲಿಲ್ಲ. ನನ್ನ ಸೇವಾವಧಿಯಲ್ಲಿ ದಾವೂದ್ ಬಂಧನಕ್ಕೆ ಸಾಕಷ್ಟು ಶ್ರಮಪಟ್ಟಿದ್ದೆ. ದಾವೂದ್ ವಿರುದ್ಧ ಕ್ರಮಕೈಗೊಳ್ಳದಂತೆ ಯಾವುದೇ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿರಲಿಲ್ಲ", ಎಂದು ಹೇಳಿದ್ದಾರೆ.
 
ಈ ಮೊದಲು ಹಿರಿಯ ವಕೀಲರಾದ ರಾಮ್  ಜೇಠ್ಮಲಾನಿ ಸಹ ದಾವೂದ್ ತಮಗೆ ಕರೆ ಮಾಡಿ  ಶರಣಾಗುವ ಕುರಿತು ಮಾತನಾಡಿದ್ದ ಎಂದು ಹೇಳಿದ್ದರು.

ವೆಬ್ದುನಿಯಾವನ್ನು ಓದಿ