ದಾವುದ್ ಪತ್ತೆಗೆ ಮೋದಿ ಸರಕಾರ ವಿಫಲ: ಕಾಂಗ್ರೆಸ್ ನಾಯಕರ ಲೇವಡಿ

ಬುಧವಾರ, 6 ಮೇ 2015 (16:35 IST)
ವಿದೇಶದಲ್ಲಿ ಅಡಗಿಕೊಂಡಿರುವ ಭೂಗತ ದೊರೆ ದಾವುದ್ ಇಬ್ರಾಹಿಂ ನನ್ನು ಮರಳಿ ದೇಶಕ್ಕೆ ತಂದು ಶಿಕ್ಷೆ ಕೊಡಿಸಲಾಗುವುದು ಎಂದು ಚುನಾವಣೆ ಸಂದರ್ಭದಲ್ಲಿ ನೀಡಿದ ವಾಗ್ದಾನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಮರೆತಿದೆ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಶುಕ್ಲಾ ಲೇವಡಿ ಮಾಡಿದ್ದಾರೆ.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೇವಲ 15 ದಿನಗಳಲ್ಲಿ ದಾವುದ್ ಇಬ್ರಾಹಿಂನನ್ನು ಬಂಧಿಸಲಾಗುವುದು ಎಂದು ಬಿಜೆಪಿ ಮುಖಂಡರು ದೇಶದ ಜನತೆಗೆ ಭರವಸೆ ನೀಡಿದ್ದರು. ಆದರೆ, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ದಾವುದ್‌ನನ್ನು ಕರೆತರಲಿಲ್ಲ, ಇಬ್ರಾಹಿಂನನ್ನು ಕರೆತರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಪಾಕಿಸ್ತಾನದೊಂದಿಗೆ ಅಪರಾಧಿಗಳ ಹಸ್ತಾಂತರ ಒಪ್ಪಂದವಿರದ ಹಿನ್ನೆಲೆಯಲ್ಲಿ, ಪಾಕ್‌ನಲ್ಲಿ ಅಡಗಿರುವ ಆರೋಪಿಗಳನ್ನು ದೇಶಕ್ಕೆ ತರುವುದು ತುಂಬಾ ಕಷ್ಟಸಾಧ್ಯ ಎಂದು ಸಿಬಿಐ ಮಾಜಿ ಜಂಟಿ ನಿರ್ದೇಶಕ ಶಂತನು ಸೇನ್ ಹೇಳಿದ್ದಾರೆ.

ನಮ್ಮಲ್ಲಿರುವ ಸಂಪನ್ಮೂಲಗಳಿಂದ ದಾವುದ್ ಇಬ್ರಾಹಿಂ ಯಾವ ದೇಶದಲ್ಲಿ ವಾಸಿಸುತ್ತಿದ್ದಾನೆ ಎಂದು ಪತ್ತೆ ಮಾಡಬಹುದೇ ಹೊರತು ಪಾಕಿಸ್ತಾನ , ದುಬೈಗೆ ತೆರಳಿ ಆರೋಪಿಯನ್ನು ಬಂಧಸಲಾಗದು ಎಂದು ತಿಳಿಸಿದ್ದಾರೆ.

ದಾವುದ್ ಇಬ್ರಾಹಿಂ ಯಾವ ದೇಶದಲ್ಲಿದ್ದಾನೆ ಎನ್ನುವ ಬಗ್ಗೆ ಮಾಹಿತಿಯಿಲ್ಲ. ಮಾಹಿತಿ ದೊರೆತ ನಂತರ ಆರೋಪಿಗಳ ಹಸ್ತಾಂತರ ಪ್ರಸ್ತಾವನೆಯನ್ನು ಸಂಬಂಧಿಸಿದ ದೇಶದ ಮುಂದಿಡಲಾಗುವುದು ಎಂದು ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಹರಿಭಾಯ್ ಪಾರ್ಥಭಾಯಿ ಚೌಧರಿ ನಿನ್ನೆ ಲೋಕಸಭೆಯಲ್ಲಿ ಹೇಳಿಕೆ ನೀಡಿ ವಿಪಕ್ಷಗಳ ಕೆಂಗೆಣ್ಣಿಗೆ ಗುರಿಯಾಗಿದ್ದರು.

ವೆಬ್ದುನಿಯಾವನ್ನು ಓದಿ