ಸತ್ತವಳು ಎದ್ದು ಕುಳಿತು ತಿಂಡಿ ತಿಂದು ಮತ್ತೆ ಸತ್ತಳು

ಶುಕ್ರವಾರ, 19 ಫೆಬ್ರವರಿ 2016 (14:50 IST)
ಅಂತ್ಯಸಂಸ್ಕಾರ ನಡೆಸುತ್ತಿದ್ದಾಗ ಸತ್ತಿದ್ದಾಳೆ ಎಂದುಕೊಂಡವಳು ಚಿತೆಯ ಮೇಲೆಯೇ ಎದ್ದು ಕುಳಿತು ಮನೆಗೆ ಮರಳಿ ತಿಂಡಿ ತಿಂದು ಮತ್ತೆ ಸಾವನ್ನಪ್ಪಿದ ವಿಚಿತ್ರ ಘಟನೆ ಮಧ್ಯಪ್ರದೇಶದ ಶ್ಯೋಪುರದಲ್ಲಿ ನಡೆದಿದೆ.
 
ಅಂದು ಬುಧವಾರ. 95 ವರ್ಷದ ಅಜ್ಜಿ ಹೀರಾಬಾಯಿ ಸತ್ತಿದ್ದಾಳೆ ತನ್ನ ಹಾಸಿಗೆಯಿಂದ ಮೇಲೆದ್ದಿರಲಿಲ್ಲ. ಜೀವವಿಹೀನವಾಗಿ ಬಿದ್ದಿದ್ದ ಆಕೆ ಸತ್ತಿದ್ದಾಳೆ ಎಂದು ಬಗೆದ ಮನೆಯವರು ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಿದ್ದರು. ಶವಯಾತ್ರೆ ನಡೆಸಿ ಮಸಣಕ್ಕೆ ಒಯ್ದು  ಚಿತೆಯ ಮೇಲೆ ಮಲಗಿಸಿ ಬೆಂಕಿ ಹಚ್ಚಬೇಕು ಎಂದುಕೊಂಡಿರುವಾಗ ಆಕೆ ಎದ್ದು ಕುಳಿತಿದ್ದಾಳೆ. 
 
ಶೋಕಸಾಗರದಲ್ಲಿ ಮುಳುಗಿದ್ದ ಅಜ್ಜಿಯ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ತಮ್ಮ ಕಣ್ಣನ್ನು ತಾವು ನಂಬಲಾಗಿಲ್ಲ. ಎದ್ದು ಕುಳಿತ ಅಜ್ಜಿಯನ್ನು ಸಂತೋಷದಿಂದ ಮನೆಗೆ ಕರೆದೊಯ್ದಿದ್ದಾರೆ. ಮನೆಗೆ ಮರಳಿದ ಅಜ್ಜಿ ತನ್ನ ಮೊಮ್ಮಕ್ಕಳೊಂದಿಗೆ ಕುಳಿತು ಮುಂಜಾನೆಯ ಉಪಹಾರವನ್ನು ಸಹ ಸೇವಿಸಿದ್ದಾಳೆ. 
 
ಆದರೆ ಪ್ರಜಾಪತಿ ಕುಟುಂಬದ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ತಿಂಡಿ ತಿಂದು ಕುಳಿತಿದ್ದ ಅಜ್ಜಿ ನನಗೆ ಸುಸ್ತಾಗುತ್ತಿದೆ ಎಂದವಳು ಮತ್ತೆ ಜೀವವನ್ನು ತ್ಯಜಿಸಿದ್ದಾಳೆ.
 
ಹೀರಾಬಾಯಿ ಕಳೆದ 15 ದಿನಗಳಿಂದ ಏನನ್ನೂ ಸಹ ತಿಂದಿರಲಿಲ್ಲ. ಹೀಗಾಗಿ ಅಶಕ್ತಳಾಗಿದ್ದಳು ಎಂದು ಆಕೆಯ ಮಗ ಹೇಳಿದ್ದಾನೆ. 

ವೆಬ್ದುನಿಯಾವನ್ನು ಓದಿ