ಮರಣದಂಡನೆಗೊಳಗಾದ ಕೈದಿಯನ್ನು ರಹಸ್ಯವಾಗಿ ಮತ್ತು ಆತುರಾತುರವಾಗಿ ಗಲ್ಲಿಗೇರಿಸುವ ಹಾಗಿಲ್ಲ: ಎಸ್‌ಸಿ

ಬುಧವಾರ, 27 ಮೇ 2015 (17:43 IST)
ಮರಣದಂಡನೆಗೊಳಗಾದ ಕೈದಿಗೆ ಜೀವಿಸುವ ಮೂಲಭೂತ ಹಕ್ಕಿನಿಂದ ವಂಚಿತಗೊಳಿಸುವ ಹಾಗಿಲ್ಲ. ಪೂರ್ವಸೂಚನೆ ನೀಡದೆ ಮತ್ತು ಅವರಿಗೆ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅವಕಾಶ ನೀಡದೆ ತಪ್ಪಿತಸ್ಥ ಕೈದಿಗಳಿಗೆ ನೇಣು ಹಾಕುವ ಹಾಗಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. 

ಕೈದಿ ತನ್ನ ಜೀವನವನ್ನುಳಿಸಿಕೊಳ್ಳಲು ಲಭ್ಯವಾಗಬಹುದಾದ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುವ ತನಕ ಆತನಿಗೆ ಮರಣದಂಡನೆ ನೀಡುವ ಹಾಗಿಲ್ಲ. ಈ ದಿಶೆಯಲ್ಲಿ ಸರಕಾರಿ ಅಧಿಕಾರಿಗಳು ಸರಿಯಾದ ವಿಧಾನವನ್ನು ಅನುಸರಿಸಬೇಕು ಎಂದು ಎ.ಕೆ. ಸಿಕ್ರಿ ಮತ್ತು ಯುಯು ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ ಸೂಚಿಸಿದೆ. 
 
ತನ್ನ ಕುಟುಂಬದ ಏಳು ಜನ ಸದಸ್ಯರನ್ನು ಕೊಲೆ ಮಾಡಿದ ಶಬನಮ್ ಮತ್ತು ಅವಳ ಪ್ರೇಮಿ ಸಲೀಂಗೆ ನೇಣಿಗೇರಿಸುವಂತೆ  ಉತ್ತರ ಪ್ರದೇಶದ ಸೆಷನ್ಸ್ ಕೋರ್ಟ್ ನೀಡಿದ್ದ ತೀರ್ಪನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್ ಈ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ. 
 
ಕೈದಿಗೆ ಅಪೆಕ್ಸ್ ಕೋರ್ಟ್ ತೀರ್ಪನ್ನು ವಿಮರ್ಶಿಸಲು ಮತ್ತು ರಾಜ್ಯಪಾಲ ಅಥವಾ ರಾಷ್ಟ್ರಪತಿ ಬಳಿ ಕ್ಷಮಾದಾನ ಅರ್ಜಿ ಸಲ್ಲಿಸಲು ಸಾಕಷ್ಟು ಸಮಯವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

ವೆಬ್ದುನಿಯಾವನ್ನು ಓದಿ