ಯಾಕುಬ್‌ಗೆ ಗಲ್ಲು: ಮಹಾರಾಷ್ಟ್ರ ಸಿಎಂ ಜೊತೆ ಪೊಲೀಸರ ಚರ್ಚೆ

ಬುಧವಾರ, 29 ಜುಲೈ 2015 (17:46 IST)
ಟಾಡಾ ಕೋರ್ಟ್ ಜಾರಿಗೊಳಿಸಿರುವ ಡೆತ್ ವಾರಂಟ್‌ನ್ನು ಪುನರ್ ಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ಉಗ್ರ ಯಾಕುಬ್ ಮೆಮೊನ್‌ಗೆ ನಾಳೆ ಗಲ್ಲು ಶಿಕ್ಷೆ ಖಚಿತ ಎಂದೇ ಹೇಳಲಾಗುತ್ತಿದೆ. 
 
ಸುಪ್ರೀಂ ಅರ್ಜಿಯನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿಯೇ ಮಹಾರಾಷ್ಟ್ರ ಸರ್ಕಾರದಲ್ಲಿ ಅದಾಗಲೇ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ಮುಖ್ಯಮಂತ್ರಿ ದೇವೇಂದ್ರ ಫಢ್ನವೀಸ್ ಹಾಗೂ ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಮತ್ತು ನಾಗ್ಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾದವ್ ಸೇರಿದಂತೆ ಪೊಲೀಸ್ ಇಲಾಖೆಯ ಉನ್ನತಾದಿಕಾರಿಗಳು ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. 
 
ಇನ್ನು ಈ ಹಿಂದೆ ಆರೋಪಿ ಯಾಕುಬ್ ಸಲ್ಲಿಸಿದ್ದ ಕ್ಷಮಾಧಾನ ಅರ್ಜಿಯನ್ನು ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಈಗಾಗಲೇ ತಿರಸ್ಕರಿಸಿದ್ದಾರೆ. ಅಲ್ಲದೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಬಳಿಯು ಒಂದು ಕ್ಷಮಾಧಾನ ಅರ್ಜಿ ಇದ್ದು, ಪ್ರಸ್ತುತ ಕೇಂದ್ರ ಗೃಹ ಇಲಾಖೆಯ ಅಭಿಪ್ರಾಯಕ್ಕಾಗಿ ಕಳುಹಿಸಿದ್ದಾರೆ. ಇಲಾಖೆಯ ಅಧಿಕಾರಿಗಳ ಅಭಿಪ್ರಾಯದ ಮೇಲೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ಆದರೆ ತಜ್ಞರರು ಯಾಕುಬ್‌ಗೆ ನಾಳೆ ಗಲ್ಲು ಶಿಕ್ಷೆ ವಿಧಿಸುವುದು ಸನ್ನಿಹಿತ ಎನ್ನುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ