ಸುಧೀಂದ್ರಗೆ ಕಪ್ಪು ಪೇಂಟ್ ಬಳೆದ ಶಿವಸೇನೆ ಕಾರ್ಯಕರ್ತರನ್ನು ಸನ್ಮಾನಿಸಿದ ಉದ್ಭವ್ ಠಾಕ್ರೆ

ಮಂಗಳವಾರ, 13 ಅಕ್ಟೋಬರ್ 2015 (16:44 IST)
ಬಿಜೆಪಿ ಸದಸ್ಯ ಸುಧೀಂದ್ರ ಕುಲ್ಕರ್ಣಿ ಮತ್ತು ಶಿವಸೇನೆಯ ಮಧ್ಯೆ ಪರಸ್ಪರ ವಾಗ್ದಾಳಿ ನಿಲ್ಲುವಂತೆ ಕಾಣುತ್ತಿಲ್ಲ. ಇದೀಗ ಕುಲ್ಕರ್ಣಿ ಮೇಲೆ ಕಪ್ಪು ಪೇಂಟ್ ಬಳೆದ ಆರು ಮಂದಿ ಶಿವಸೇನೆ ಕಾರ್ಯಕರ್ತರನ್ನು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಸನ್ಮಾನಿಸಿದ್ದಾರೆ.
 
ದಾದರ್‌ನಲ್ಲಿರುವ ಮಾತೋಶ್ರೀ ನಿವಾಸದಲ್ಲಿ ಆರು ಮಂದಿ ಕಾರ್ಯಕರ್ತರನ್ನು ಭೇಟಿ ಮಾಡಿದ ಠಾಕ್ರೆ, ಯುವಕರು ದೇಶಕ್ಕಾಗಿ ಇಂತಹ ಕೃತ್ಯ ಎಸಗಿದ್ದಾರೆ ಎಂದು ಹೊಗಳಿದರು.
 
ಸುಧೀಂದ್ರ ಕುಲ್ಕರ್ಣಿ ಪಾಕಿಸ್ತಾನಕ್ಕೆ ನೆರವಾಗುತ್ತಿದ್ದಾರೆ. ದೇಶದಲ್ಲಿ ಕಾರ್ಗಿಲ್ ಯುದ್ಧಕ್ಕೆ ಕಾರಣವಾದ ಪಾಕಿಸ್ತಾನದ ಮಾಜಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷ್ರಫ್ ಅವರಿಗೆ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮುದ್ ಕಸೂರಿ ಸಲಹೆಗಾರರಾಗಿದ್ದರು ಎಂದು ಶಿವಸೇನೆ ವಕ್ತಾರ ಮನೀಷಾ ಕಾಯಂಡೆ ಹೇಳಿದ್ದಾರೆ.
 
ಸುಧೀಂದ್ರ ಅವರಿಗೆ ಕಪ್ಪು ಮಸಿ ಬಳೆದಿರುವುದು ನಾಗರಿಕ ಪ್ರತಿಭಟನೆಯಂತೆ. ಗುಲಾಮ್ ಅಲಿ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಕಾರ್ಯಕ್ರಮವನ್ನು ರದ್ದುಗೊಳಿಸಿದರು. ಅದರಂತೆ, ಕುಲ್ಕರ್ಣಿ ಕೂಡಾ ಕಾರ್ಯಕ್ರಮವನ್ನು ರದ್ದುಗೊಳಿಸಬಹುದಿತ್ತು ಎಂದು ಹೇಳಿದ್ದಾರೆ. 
 
ಶಿವಸೇನೆ ಕಾರ್ಯಕರ್ತರು ಎಸಗಿದ ಕೃತ್ಯಕ್ಕೆ ಮುಂಬೈ ಮತ್ತು ಮಹಾರಾಷ್ಟ್ರ ಸೇರಿದಂತೆ ಸಂಪೂರ್ಣ ದೇಶವೇ ಸಂತಸಗೊಂಡಿದೆ. ದೇಶದ ಎಲ್ಲಾ ರಾಜ್ಯಗಳಿಂದ ನಮಗೆ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿದೆ ಎಂದು ಶಿವಸೇನೆ ವಕ್ತಾರ ಮನೀಷಾ ಕಾಯಂಡೆ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ