ದೆಹಲಿ ವಿಧಾನಸಭೆ ಚಳಿಗಾಲದ ಅಧಿವೇಶನ: ಬಿಜೆಪಿ-ಆಪ್ ಮಧ್ಯೆ ಬಿಗ್ ಫೈಟ್

ಬುಧವಾರ, 18 ನವೆಂಬರ್ 2015 (19:49 IST)
ದೆಹಲಿ ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕರು ದಿವಂಗತ ವಿಎಚ್‌ಪಿ ನಾಯಕ ಅಶೋಕ್ ಸಿಂಘಾಲ್ ಅವರಿಗೆ ಶೃದ್ದಾಂಜಲಿ ಅರ್ಪಿಸುವ ಬೇಡಿಕೆಯನ್ನು ಸಭಾಪತಿ ತಿರಸ್ಕರಿಸಿದ್ದರಿಂದ ಸದನ ಕೋಲಾಹಲದೊಂದಿಗೆ ಆರಂಭವಾಯಿತು.
 
ಬಿಜೆಪಿ ಸದಸ್ಯರ ಬೇಡಿಕೆಯನ್ನು ಆಪ್ ಶಾಸಕರು ತಿರಸ್ಕರಿಸಿದ ನಂತರ, ಸಭಾಪತಿ ಕೂಡಾ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದರಿಂದ ಬಿಜೆಪಿ ಶಾಸಕರು ಆಕ್ರೋಶಭರಿತರಾಗಿ ಕೂಗಾಟ ಆರಂಭಿಸಿದರು. 
 
ಪ್ಯಾರಿಸ್ ಉಗ್ರರ ದಾಳಿಯಲ್ಲಿ ಮೃತರಾದವರಿಗಾಗಿ ಶೃದ್ದಾಂಜಲಿ ಅರ್ಪಿಸುವುದರೊಂದಿಗೆ ಚಳಿಗಾಲದ ಅಧಿವೇಶನ ಆರಂಭವಾಯಿತು. ತದನಂತರ ವಿಪಕ್ಷ ನಾಯಕ ವಿಜೇಂದರ್ ಗುಪ್ತಾ, ವಿಎಚ್‌ಪಿ ನಾಯಕ ಸಿಂಘಾಲ್ ಅವರಿಗೆ ಶೃದ್ದಾಂಜಲಿ ಅರ್ಪಿಸುವಂತೆ ಸದನದ ಮುಂದೆ ಬೇಡಿಕೆಯಿಟ್ಟರು.
 
ಅಧಿಕಾರರೂಢ ಶಾಸಕರಾದ ಜಗದೀಪ್ ಸಿಂಗ್, ಅಮಾನುತುಲ್ಲಾ ಖಾನ್, ಸೋಮನಾಥ್ ಭಾರ್ತಿ ಗುಪ್ತಾ ಬೇಡಿಕೆಗೆ ತೀವ್ರ ವಿರೋಧವ್ಯಕ್ತಪಡಿಸಿದರು. ಆದರೆ ಸಿಂಘಾಲ್, ಬಾಬ್ರಿ ಮಸೀದಿ ನಾಶ ಚಳುವಳಿಯಲ್ಲಿ ಬಾಗಿಯಾಗಿದ್ದು, ಸಮಾಜ ಸೇವೆಗೆ ತಮ್ಮ ಜೀವನ ಮೀಸಲಾಗಿಟ್ಟಿದ್ದರು ಎಂದು ಬಿಜೆಪಿಯ ಇಬ್ಬರು ಸದಸ್ಯರು ವಾಗ್ವಾದ ಆರಂಭಿಸಿದರು.
 
ವಿಧಾನಸಭೆಯಲ್ಲಿ ವಾದ ಪ್ರತಿವಾದಗಳು ಮುಂದುವರಿಯುತ್ತಿದ್ದಂತೆ ಸಭಾಪತಿ ರಾಮ್ ನಿವಾಸ್ ಗೋಯಲ್, ಸಿಂಘಾಲ್ ಯಾವುದೇ ಸಂವಿಧಾನದ ಹುದ್ದೆ ಹೊಂದಿರದಿದ್ದರಿಂದ ಅವರಿಗೆ ಸದನದಲ್ಲಿ ಶೃದ್ದಾಂಜಲಿ ಸಲ್ಲಿಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. 
 
ಆಮ್ ಆದ್ಮಿ ಪಕ್ಷದ ಶಾಸಕರ ತೀವ್ರ ಪ್ರತಿಭಟನೆಗೆ ಮಣಿದ ಸಭಾಪತಿ, ಕೋಮುವಾದದ ಹಿನ್ನೆಲೆ ಮತ್ತು ಸಮಾಜ ವಿಭಜಕ ಕೃತ್ಯಗಳಲ್ಲಿ ತೊಡಗಿದ್ದರಿಂದ ಅವರ ಹೆಸರನ್ನು ಸಚಿವಾಲಯದ ದಾಖಲೆಗಳನ್ನು ತೆಗೆದು ಹಾಕುವುದಾಗಿ ಭರವಸೆ ನೀಡಿದರು.
 
ಚಳಿಗಾಲದ ಅಧಿವೇಶನ ಮಧ್ಯಾಹ್ನ 2 ಗಂಟೆಗೆ ಆರಂಭವಾಯಿತಾದರೂ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸದನದಲ್ಲಿ ಉಪಸ್ಥಿತರಿರಲಿಲ್ಲ. ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹಾಜರಾಗಿದ್ದರು.

ವೆಬ್ದುನಿಯಾವನ್ನು ಓದಿ