46,600 ಕೋ.ರೂ ಬಜೆಟ್ ಮಂಡಿಸಿದ ದೆಹಲಿ ಸರಕಾರ: ಗಾರ್ಮೆಂಟ್, ಶೂ ದರಗಳಲ್ಲಿ ಇಳಿಕೆ ಸಾಧ್ಯತೆ

ಸೋಮವಾರ, 28 ಮಾರ್ಚ್ 2016 (20:11 IST)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರಕಾರ ಇಂದು ತೆರಿಗೆ ಮುಕ್ತ ಬಜೆಟ್ ಮಂಡಿಸಿದ್ದರಿಂದ ರೆಡಿಮೇಡ್ ಬಟ್ಟೆಗಳು, ಶೂ, ವಾಚ್ ಮತ್ತು ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳ ದರಗಳಲ್ಲಿ ಇಳಿಕೆಯಾಗಲಿವೆ. 
 
ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ 2016-2017 ಸಾಲಿನ 46,600 ಕೋಟಿ ರೂಪಾಯಿಗಳ ವಾರ್ಷಿಕ ಬಜೆಟ್ ಮಂಡಿಸಿದ್ದಾರೆ. ನಿರೀಕ್ಷೆಯಂತೆ ಶಿಕ್ಷಣ, ಆರೋಗ್ಯ ಮತ್ತು ಸಾರಿಗೆ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
 
ಮಹಿಳಾ ಸುರಕ್ಷತೆ, ಭದ್ರತೆ ಮತ್ತು ಉದ್ಯೋಗಕ್ಕಾಗಿ 1068 ಕೋಟಿ ರೂಪಾಯಿ ಮೀಸಲಾಗಿಡಲಾಗಿದೆ. ಮಹಿಳೆಯರ ಕ್ಷೇಮಾಭಿವೃದ್ಧಿ ಯೋಜನೆಗಳಿಗೆ 1381 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ.
 
ದೆಹಲಿ ಸರಕಾರ ಅಧಿಕೃತ ಮತ್ತು ಅನಧಿಕೃತ ಕಾಲೋನಿಗಳಿಗೆ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಸರಬರಾಜಿಗಾಗಿ ನಿರ್ಧರಿಸಿದ್ದು, ಇದಕ್ಕಾಗಿ 676 ಕೋಟಿ ರೂ ಮೀಸಲಾಗಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.
 
2015ಕ್ಕೆ ಹೋಲಿಸಿದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇಡಲಾದ ಹಣದಲ್ಲಿ ಶೇ. 8.68 ರಷ್ಟು ಏರಿಕೆಗೊಳಿಸಿ 10,690 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿದೆ.
 
21 ಹೊಸ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. 8 ಸಾವಿರ ಹೊಸ ಶಾಲಾ ಕೋಣೆಗಳನ್ನು ನಿರ್ಮಾಣ ಮಾಡಲಾಗುವುದು. ಪ್ರತಿಯೊಂದು ಕ್ಲಾಸ್‌ರೂಮ್‌ಗೆ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಗಾಗಿ 100 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ