ರೋಹಿತ್ ವೇಮುಲ ತಮ್ಮನಿಗೆ ಸರ್ಕಾರಿ ಕೆಲಸ

ಗುರುವಾರ, 25 ಫೆಬ್ರವರಿ 2016 (14:15 IST)
ಕಳೆದ ತಿಂಗಳು ಆತ್ಮಹತ್ಯೆಗೆ ಶರಣಾದ ಹೈದ್ರಾಬಾದ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಕಿರಿಯ ಸಹೋದರನಿಗೆ ಸರ್ಕಾರಿ ಕೆಲಸ ಕೊಡಲು ದೆಹಲಿಯ ಆಪ್ ಸರ್ಕಾರ ನಿರ್ಧರಿಸಿದೆ. 

ಮೃತನ ತಾಯಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರನ್ನು ಭೇಟಿಯಾಗಿ ತಮ್ಮ ಕುಟುಂಬ ಆರ್ಥಿಕ ದುಃಸ್ಥಿತಿಯಲ್ಲಿದ್ದು, ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಆಪ್ ಸರ್ಕಾರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ಕೊಡುವ ನಿರ್ಧಾರ ಮಾಡಿದೆ. 
 
ಅನ್ವಯಿಕ ಭೂ ವಿಜ್ಞಾನದಲ್ಲಿ ಪದವಿ ಪಡೆದಿರುವ ತಮ್ಮ ಕಿರಿಯ ಮಗ ರಾಜಾ ವೇಮುಲ ಮತ್ತು ರೋಹಿತ್ ವೇಮುಲ ಆಪ್ತ ಸ್ನೇಹಿತ ಸುಂಕನ್ನ ವೇಮುಲ ಜತೆಯಲ್ಲಿ ರಾಧಿಕಾ ಅವರು ಕೇಜ್ರಿವಾಲ್ ನಿವಾಸಕ್ಕೆ ಭೇಟಿ ಇತ್ತಿದ್ದರು. 
 
ರೋಹಿತ್ ತಾಯಿ ರಾಧಿಕಾ ತಮ್ಮ ಮಗನಿಗೆ ಸರ್ಕಾರಿ ಕೆಲಸ ನೀಡಿರೆಂದು ಕೇಜ್ರಿವಾಲ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ. ಕುಟುಂಬಕ್ಕೆ ಯಾವುದೇ ರೀತಿಯ ಆರ್ಥಿಕ ಮೂಲಗಳಿಲ್ಲದಿರುವುದರಿಂದ ಅವರ ಬೇಡಿಕೆಯನ್ನು ಈಡೇರಿಸುವುಜಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
 
ಕೇಜ್ರಿವಾಲ್ ನೇತೃತ್ವದಲ್ಲಿ ಸಭೆ ಸೇರಿದ ಸಚಿವ ಸಂಪುಟ ರಾಜಾನಿಗೆ ಸೂಕ್ತ ಕೆಲಸ ಕೊಡಿಸುವ ನಿರ್ಧಾರಕ್ಕೆ ಬಂದಿದೆ. 
 
ಕಳೆದ ತಿಂಗಳು 17 ರಂದು ರೋಹಿತ್ ವೇಮುಲ್ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನಿಗೆ ನ್ಯಾಯ ನೀಡಬೇಕೆಂದು ದೇಶದೆಲ್ಲೆಡೆಯ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ರೋಹಿತ್ ಕುಟುಂಬ ಕೂಡ ಪಾಲ್ಗೊಂಡಿತ್ತು. 

ವೆಬ್ದುನಿಯಾವನ್ನು ಓದಿ