ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ 10 ಲಕ್ಷ ರೂ.ವರೆಗೆ ಸಾಲ: ಕೇಜ್ರಿವಾಲ್ ಘೋಷಣೆ

ಮಂಗಳವಾರ, 1 ಸೆಪ್ಟಂಬರ್ 2015 (21:45 IST)
ದೆಹಲಿ ವಿಶ್ವವಿದ್ಯಾಲಯದ ಯುನಿಯನ್‌ಗಳ ಚುನಾವಣೆ ಮುಂದಿರುವಂತೆಯೇ ವಿದ್ಯಾರ್ಥಿಗಳಿಗಾಗಿ ಉನ್ನತ ಶಿಕ್ಷಣಕ್ಕಾಗಿ ಸಾಲ ನೀಡುವ ಯೋಜನೆಯನ್ನು ಸೆಪ್ಟೆಂಬರ್ 8 ರಂದು ಆಮ್ ಆದ್ಮಿ ಪಕ್ಷದ ಸರಕಾರ ಅಧಿಕೃತವಾಗಿ ಘೋಷಿಸಲಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. 
 
ಯಾವುದೇ ಭದ್ರತೆಯಿಲ್ಲದ ಶೈಕ್ಷಣಿಕ ಸಾಲದ ಚೆಕ್‌ನ್ನು ಅರ್ಹರಾದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 8 ರಂದು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. 
 
ಈ ಯೋಜನೆಯಡಿಯಲ್ಲಿ ಯಾವುದೇ ವಿದ್ಯಾರ್ಥಿ ದೆಹಲಿ ಸರಕಾರದಿಂದ 10 ಲಕ್ಷ ರೂಪಾಯಿಗಳವರೆಗೆ ಭದ್ರತಾ ರಹಿತ ಸಾಲವನ್ನು ಪಡೆಯಬಹುದಾಗಿದೆ ಎಂದು ಹೇಳಿದರು. 
 
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಸೋಡಿಯಾ, ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಎದುರಾದಲ್ಲಿ ನಮಗೆ ಮಾಹಿತಿ ನೀಡಿ ನಿಮ್ಮ ಕಾಲೇಜಿನ ಶುಲ್ಕವನ್ನು ನಾವು ಭರಿಸುತ್ತೇವೆ ಎಂದರು.
 
ಆಮ್ ಆದ್ಮಿ ಪಾರ್ಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ವಿಶಾಲ್ ದಾಡ್ಲಾನಿ, ರಘುರಾಮ್, ಶಿಲ್ಪಾ ರಾವ್ ಮತ್ತು ಜಸ್ಲಿನ್ ರಾಯಲ್ ಪ್ರದರ್ಶನ ನೋಡಲು ತಾಲ್‌ಕಟೋರಾ ಕ್ರೀಡಾಂಗಣದಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು.  
 
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮನೀಷ್ ಸಿಸೋಡಿಯಾ, ಸಚಿವರಾದ ಗೋಪಾಲ್ ರೈ, ಸಂದೀಪ್ ಕುಮಾರ್ ದಿಲೀಪ್ ಪಾಂಡೆ ಸೇರಿದಂತೆ ಪಕ್ಷದ ಹಿರಿಯ ನಾಯಕರು ಉಪಸ್ಥಿತರಿದ್ದರು. 

ವೆಬ್ದುನಿಯಾವನ್ನು ಓದಿ