ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ: ಸಿಎಂ ಕೇಜ್ರಿವಾಲ್‌ರಿಂದ ಸಚಿವರ ಸಮಿತಿ ರಚನೆ

ಬುಧವಾರ, 21 ಅಕ್ಟೋಬರ್ 2015 (17:01 IST)
ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವೆಸಗುವ ಕಾಮುಕರಿಗೆ ಕಠಿಣ ಶಿಕ್ಷೆ ನೀಡುವ ಕುರಿತಂತೆ ಶಿಫಾರಸ್ಸು ಮಾಡಲು ಸಚಿವರ ಸಮಿತಿಯನ್ನು ರಚಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಪುಟ ಸಭೆ ನಿರ್ಧರಿಸಿದೆ. 
 
ಅತ್ಯಾಚಾರ, ಹತ್ಯೆಯಲ್ಲಿ ಭಾಗಿಯಾಗಿರುವ 15 ವರ್ಷಕ್ಕಿಂತ ಮೇಲ್ಪಟ್ಟವರನ್ನು ವಯಸ್ಕರು ಎಂದು ಪರಿಗಣಿಸುವ ಬಗ್ಗೆ ಸಚಿವರ ಸಮಿತಿ ಅಧ್ಯಯನ ನಡೆಸಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. 
 
ಪ್ರಸ್ತುತ 16 ರಿಂದ 18 ವರ್ಷದವರನ್ನು ವಯಸ್ಕರು ಎಂದು ಪರಿಗಣಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ಮಹಿಳೆಯರು ಮತ್ತು ಮಕ್ಕಳ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ಪೊಲೀಸ್ ಠಾಣೆಗಳನ್ನು ಆರಂಭಿಸುವ ಬಗ್ಗೆ ಕೂಡಾ ಸಚಿವರ ಸಮಿತಿ ಬೆಳಕು ಚೆಲ್ಲಲಿದೆ ಎಂದು ಹೇಳಿದ್ದಾರೆ. 
 
ಸಚಿವರ ಸಮಿತಿಗೆ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಆರೋಗ್ಯ ಖಾತೆ ಸಚಿವ ಸತ್ಯೇಂದ್ರ ಜೈನ್ ನೇತೃತ್ವವಹಿಸಲಿದ್ದು, 15 ದಿನಗಳೊಳಗಾಗಿ ವರದಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
 
ಕೇಜ್ರಿವಾಲ್ ವ್ಯರ್ಥವಾಗಿ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಕೇಜ್ರಿವಾಲ್ ನೀಡುತ್ತಿರುವ ಹೇಳಿಕೆಗಳು ಕೇಂದ್ರ ಸರಕಾರಕ್ಕೆ ಸಂಬಂಧಿಸಿದ್ದಾಗಿವೆ. ಸುಪ್ರೀಂಕೋರ್ಟ್ ಅಥವಾ ಸಂಸತ್ತು ಮಾತ್ರ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ಲೇವಡಿ ಮಾಡಿದೆ.

ವೆಬ್ದುನಿಯಾವನ್ನು ಓದಿ