ಬಂಧಿತ ಕನೈಯ್ಯಾ ಕುಮಾರ್‌ಗೆ ಷರತ್ತುಬದ್ಧ ಮಧ್ಯಂತರ ಜಾಮೀನು

ಬುಧವಾರ, 2 ಮಾರ್ಚ್ 2016 (20:01 IST)
ದೇಶದ್ರೋಹ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಿ ಬಂಧಿಸಲಾಗಿದ್ದ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನೈಯ್ಯಾ ಕುಮಾರ್‌ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
 
ದೇಶದ್ರೋಹ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ದೆಹಲಿ ಪೊಲೀಸರು ಕನೈಯ್ಯಾ ಕುಮಾರ್‌ನನ್ನು ಬಂಧಿಸಿ, ನ್ಯಾಯಾಂಗದ ಮುಂದೆ ಹಾಜರುಪಡಿಸಿದ್ದರು. ಪ್ರಕರಣದ ತನಿಖೆಯ ವರದಿ ಬರುವವರೆಗೆ ನ್ಯಾಯಾಲಯ 6 ತಿಂಗಳುಗಳ ಕಾಲ ಮಧ್ಯಂತರ ಜಾಮೀನು ನೀಡಿದೆ ಎಂದು ಸರಕಾರಿ ವಕೀಲರಾದ ಶೈಲೆಂದ್ರ ಬಬ್ಬರ್ ತಿಳಿಸಿದ್ದಾರೆ.
 
ಕನೈಯ್ಯಾ ಕುಮಾರ್ 10 ಸಾವಿರ ರೂಪಾಯಿಗಳ ಭದ್ರತಾ ಬಾಂಡ್ ಮತ್ತು ಅಷ್ಟೆ ಮೊತ್ತದ ಹಣವನ್ನು ಕೋರ್ಟ್‌ಗೆ ಸಲ್ಲಿಸಬೇಕು. ಜಾಮೀನಿಗಾಗಿ ನೀಡಿದ ಭದ್ರತೆಯ ಕುರಿತಂತೆ ಕನೈಯ್ಯಾ ಬದ್ಧರಾಗಿರಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. 
 
ಕಳೆದ ಫೆಬ್ರವರಿ 9 ರಂದು ಜೆಎನ್‌ಯು ಕ್ಯಾಂಪಸ್‌ನಲ್ಲಿ ದೇಶದ್ರೋಹ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಕನೈಯ್ಯಾ ಕುಮಾರ್‌ನನ್ನು ಬಂಧಿಸಿ ತಿಹಾರ್ ಜೈಲಿಗೆ ತಳ್ಳಲಾಗಿತ್ತು.
 
ಕನೈಯ್ಯಾ ಕುಮಾರ್ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿ, ನನ್ನ ಕಕ್ಷಿದಾರ ಯಾವತ್ತೂ ದೇಶದ್ರೋಹ ಘೋಷಣೆ ಕೂಗಿಲ್ಲ ಎಂದು ಹೇಳಿದ್ದಾರೆ. ಆದರೆ ದೆಹಲಿ ಪೊಲೀಸರು, ಕುಮಾರ್ ಸಂಸತ್ ದಾಳಿ ರೂವಾರಿ ಅಫ್ಜಲ್ ಗುರು ಭಾವಚಿತ್ರ ಹಿಡಿದು ದೇಶದ್ರೋಹ ಘೋಷಣೆಗಳನ್ನು ಕೂಗಿದ ಬಗ್ಗೆ  ಸಾಕ್ಷ್ಯಗಳಿವೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದೆ.  
 
ಗುಪ್ತಚರ ದಳ ಮತ್ತು ದೆಹಲಿ ಪೊಲೀಸರು ಜಂಟಿಯಾಗಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಆರೋಪಿ ಕನೈಯ್ಯಾಕುಮಾರ್ ತನಿಖೆಗೆ ಸಹಕರಿಸಿಲ್ಲ ಎಂದು ಪೊಲೀಸರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
 
ಕನೈಯ್ಯಾ ಕುಮಾರ್ ಪರ ಮತ್ತೊಬ್ಬ ಹಿರಿಯ ವಕೀಲರಾದ ಕಪಿಲ್ ಸಿಬಲ್ ವಾದ ಮಂಡಿಸಿ, ಜೆಎನ್‌ಯು ಆವರಣದಲ್ಲಿ ಕೆಲ ಹೊರಗಿನ ವ್ಯಕ್ತಿಗಳು ಮುಖವನ್ನು ಮುಚ್ಚಿಕೊಂಡು ದೇಶದೋಹಿ ಘೋಷಣೆಗಳನ್ನು ಕೂಗುತ್ತಿರುವಾಗ, ಕನೈಕುಮಾರ್ ಅವರ ಗುರುತಿನ ಪತ್ರಗಳನ್ನು ಕೇಳುತ್ತಿರುವಾಗ ಸಿಸಿಟಿವಿಯಲ್ಲಿ ಕಂಡುಬಂದಿದ್ದಾನೆ ಎಂದು ವಾದಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ