ದೆಹಲಿ ಕಾನೂನು ಸಚಿವರ ಕಾನೂನು ಪದವಿಯೇ ನಕಲಿ?

ಮಂಗಳವಾರ, 28 ಏಪ್ರಿಲ್ 2015 (17:57 IST)
ದೆಹಲಿಯ ಕಾನೂನು ಸಚಿವರಾದ ಜಿತೇಂದರ್ ಸಿಂಗ್ ತೋಮರ್ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಅವರು ಕಾನೂನು ಪದವಿ ಪಡೆದಿದ್ದಾರೆ ಎಂಬುದಕ್ಕೆ ದಾಖಲೆಗಳಿಲ್ಲ ಎಂದು ದೆಹಲಿ ಕೋರ್ಟ್ ಹೇಳಿದ್ದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 

ಇದಕ್ಕೆ ಪ್ರತಿಯಾಗಿ ಅವರನ್ನು ವಜಾ ಮಾಡುವಂತೆ ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಸರಕಾರಕ್ಕೆ ಒತ್ತಾಯಿಸಿದ್ದಾರೆ. 
 
"ತೋಮರ್ ಅವರ ತಾತ್ಕಾಲಿಕ ಪ್ರಮಾಣಪತ್ರ ನಕಲಿಯಾಗಿದ್ದು ವಿಶ್ವವಿದ್ಯಾಲಯದ ದಾಖಲೆಯಲ್ಲಿ ಅವರು ಪಡೆದ ಪದವಿ ಪ್ರಮಾಣಪತ್ರ ಅಸ್ತಿತ್ವದಲ್ಲಿಲ್ಲ", ಎಂದು ತಿಲಕ್ ಮಂಜಿ ಭಗಲ್ಪುರ್ ವಿಶ್ವವಿದ್ಯಾಲಯ ನ್ಯಾಯಾಲಯದಲ್ಲಿ ಅಫಡವಿಟ್ ಸಲ್ಲಿಸಿತ್ತು. 
 
ತೋಮರ್ ನಕಲಿ ಪ್ರಮಾಣಪತ್ರ ಬಳಸಿ ವಕೀಲಿ ವೃತ್ತಿಯನ್ನು ಕೈಗೊಂಡಿದ್ದರು ಎಂದು ಕೋರ್ಟ್ ಹೊರಡಿಸಿದ್ದ ನೋಟಿಸ್ ಒಂದಕ್ಕೆ ವಿಶ್ವವಿದ್ಯಾಲಯ ಈ ರೀತಿಯಾಗಿ ಪ್ರತಿಕ್ರಿಯಿಸಿತ್ತು.
 
ಪ್ರಥಮ ಬಾರಿ ಮಂತ್ರಿ ಪದವಿಯನ್ನಲಂಕರಿಸಿರುವ 48ರ ಹರೆಯದ ತೋಮರ್, ಕೋರ್ಟ್ ಕಟಕಟೆಯಲ್ಲಿ ನಿಂತ ಆಪ್‌ನ ಎರಡನೇ ಕಾನೂನು ಸಚಿವರಾಗಿದ್ದಾರೆ. 
 
ಆಪ್‌ನ ಮಾಜಿ ಕಾನೂನು ಮಂತ್ರಿ ಸೋಮನಾಥ್ ಭಾರ್ತಿ ದಕ್ಷಿಣ ದೆಹಲಿಯ ಕಾಲೋನಿಯೊಂದರಲ್ಲಿ ಮಧ್ಯರಾತ್ರಿ ರೈಡ್ ಮಾಡಿದ್ದಕ್ಕೆ ಕೋರ್ಟ್ ಮೆಟ್ಟಿಲೇರುವ ಪರಿಸ್ಥಿತಿ ನಿರ್ಮಾಣವಾಗಿತ್ತು. 

ವೆಬ್ದುನಿಯಾವನ್ನು ಓದಿ