ದೆಹಲಿ: ಬಾಲಕರು ಸೇರಿದಂತೆ ಐದು ಜನರಿಂದ ಬಾಲಕಿಯ ಮೇಲೆ ಗ್ಯಾಂಗ್ ರೇಪ್

ಮಂಗಳವಾರ, 29 ಜುಲೈ 2014 (11:57 IST)
ರಾಷ್ಟ್ರ ರಾಜಧಾನಿಯಲ್ಲಿ ಅತ್ಯಾಚಾರದ ವರದಿ ಹೊಸದೇನೂ ಅಲ್ಲ ಬಿಡಿ. ದಿನ ಪ್ರತಿದಿನದಂತೆ ಇಂದು ಕೂಡ ಭೀಕರ ಅತ್ಯಾಚಾರದ ಪ್ರಕರಣವೊಂದು ದಾಖಲಾಗಿದ್ದು 10 ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ಮೇಲೆ ಐದು ಜನ ಯುವಕರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ತುಂಬ ತಡವಾಗಿ ಬೆಳಕಿಗೆ ಬಂದಿದೆ. ಅವರಲ್ಲಿ ಇಬ್ಬರು ಅಪ್ರಾಪ್ತ ಬಾಲಕರಾಗಿದ್ದಾರೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

 
ಈ ಘಟನೆ ನಡೆದು ಒಂದು ವಾರ ಕಳೆದಿದ್ದು,  ಉತ್ತಮನಗರದ ವಾಸಿಯಾಗಿರುವ ಹುಡುಗಿ ಮನೆಯಿಂದ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಆಕೆಯನ್ನು ಅಪಹರಿಸಿದ ಯುವಕರು ಪಿಸ್ತೂಲು ತೋರಿಸಿ ಬೆದರಿಕೆ ಒಡ್ಡಿ ತಮ್ಮ ದುರುಳುತನವನ್ನು ಪ್ರದರ್ಶಿಸಿದ್ದಾರೆ. ಅವರೆಲ್ಲರೂ ಬಾಲಕಿಗೆ ಪರಿಚಿತರೇ ಆಗಿದ್ದಾರೆ. 
 
ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಗುಂಡಿಟ್ಟು ಸಾಯಿಸುವುದಾಗಿ ಆರೋಪಿಗಳಲ್ಲಿ ಒಬ್ಬ ಬೆದರಿಕೆ ಒಡ್ಡಿದ್ದ. ಹಾಗಾಗಿ ಆಕೆ ಈ ಕುರಿತು ಯಾರಿಗೂ ವಿಷಯ ತಿಳಿಸಿರಲಿಲ್ಲ.  ಆದರೆ ಆಕೆಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ  ತಂದೆ ತಾಯಿಗಳು ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದಾಗ ವಿಷಯ ಬೆಳಕಿಗೆ ಬಂದಿದೆ. 
 
ಕೂಡಲೇ ಪೀಡಿತಳ ಪಾಲಕರು ಪ್ರಕರಣವನ್ನು ದಾಖಲಿಸಿದ್ದಾರೆ.  ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಅಪರಾಧಿಗಳನ್ನು ಬಂಧಿಸಿರುವ ಪೋಲಿಸರು ಪರಾರಿಯಾಗಿರುವ ಇಬ್ಬರಿಗಾಗಿ ಪೋಲಿಸರು ತೀವೃ ಶೋಧ ನಡೆಸಿದ್ದಾರೆ.  ತಮ್ಮ ಕೃತ್ಯದ ಸಂಪೂರ್ಣ ದೃಶ್ಯಾವಳಿಗಳನ್ನು ಅವರು ಮೊಬೈಲ್‌ನಲ್ಲಿ  ಚಿತ್ರೀಕರಿಸಿ ಕೊಂಡಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. 

ವೆಬ್ದುನಿಯಾವನ್ನು ಓದಿ