5 ಪೈಸೆ ನಷ್ಟಕ್ಕಾಗಿ 41 ವರ್ಷಗಳ ಕಾನೂನು ಹೋರಾಟ

ಸೋಮವಾರ, 28 ಜುಲೈ 2014 (13:43 IST)
ಇದು ವಿಚಿತ್ರವೆನಿಸಿದರೂ ನಂಬಲೇ ಬೇಕಾದ ಸತ್ಯ. ಪ್ರತಿ ವರ್ಷ  1,000 ಕೋಟಿ ರೂ. ನಷ್ಟ ಅನುಭವಿಸುತ್ತಿರುವ ದೆಹಲಿ ಸಾರಿಗೆ ಸಂಸ್ಥೆ ಕೇವಲ 5 ಪೈಸೆ ನಷ್ಟ ಉಂಟುಮಾಡಿದ್ದ ಮಾಜಿ ನೌಕರನ ವಿರುದ್ಧದ ಪ್ರಕರಣದಲ್ಲಿ 41 ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದೆ. ದೆಹಲಿ ಸಾರಿಗೆ ಇಲಾಖೆಯಲ್ಲಿ ನಿರ್ವಾಹಕನಾಗಿ ಸೇವೆ ಸಲ್ಲಿಸಿ 5 ಪೈಸೆ ನಷ್ಟ ಉಂಟು ಮಾಡಿದ್ದ ಆರೋಪಿ ಪ್ರಾಯ ಈಗ 70 ವರ್ಷ. 

ಸುಮಾರು 4 ದಶಕಗಳ ಹಿಂದೆ ಸಾರಿಗೆ ಸಂಸ್ಥೆಗೆ 5 ಪೈಸೆ ನಷ್ಟ ಉಂಟುಮಾಡಿದ್ದಾರೆ ಎನ್ನಲಾದ ಮಾಜಿ ನೌಕರನ ವಿರುದ್ಧದ ಪ್ರಕರಣದ ವಿಚಾರಣೆಗೆ ಸಂಸ್ಥೆ ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದೆ.
 
1973ರಲ್ಲಿ ಮಾಯಾಪುರಿ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ ಏರಿದ ಟಿಕೆಟ್ ಪರಿಶೀಲನಾ ತಂಡ, ಕಂಡಕ್ಟರ್ ರಣವೀರ್ ಸಿಂಗ್,  ಮಹಿಳಾ ಪ್ರಯಾಣಿಕರೊಬ್ಬರಿಗೆ 15 ಪೈಸೆ ಟಿಕೆಟ್ ಬದಲಿಗೆ ಸಿಂಗ್ 10 ಪೈಸೆ ಟಿಕೆಟ್ ನೀಡುವ ಮೂಲಕ ಸಂಸ್ಥೆಗೆ 5 ಪೈಸೆ ನಷ್ಟ ಉಂಟುಮಾಡಿದ್ದಾರೆ ಎಂದು ಪತ್ತೆ ಮಾಡಿದ್ದರು. ಸಿಂಗ್ ನಿರ್ಲಕ್ಷ್ಯದಿಂದ ಸಂಸ್ಥೆಗೆ ನಷ್ಟ ಉಂಟಾಗಿದೆ . ಇದು ದ್ರೋಹ ಎಂದು ಟಿಕೆಟ್ ಪರಿಶೀಲನಾ ತಂಡ ನಿರ್ಧರಿಸಿದಾಗಲೇ ತಾನು ತಪ್ಪು ಮಾಡಿದ್ದೇನೆಂದು ರಣವೀರ್ ಸಿಂಗ್‌ಗೆ ಮನವರಿಕೆಯಾಯಿತು. 
 
ಈ ಪ್ರಕರಣದ ಬಗ್ಗೆ ಇಲಾಖೆ ಮಟ್ಟದಲ್ಲಿ ತನಿಖೆ ನಡೆಸಲಾಗಿ , ಸಾರ್ವಜನಿಕ ಖಜಾನೆಗೆ ಸಿಂಗ್ 5 ಪೈಸೆ ನಷ್ಟ ಉಂಟು ಮಾಡಿದ್ದು ಅಪರಾಧ ಎಂದು ತೀರ್ಮಾನಿಸಲಾಯಿತು. ಅವರು ಪುನಃ ಪುನಃ ತಪ್ಪು ಮಾಡಿದ್ದಾರೆ ಎಂಬ ಆರೋಪದ ಮೇಲೆ ಮೇಲೆ 1976ರಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವ ಆದೇಶ ನೀಡಲಾಯಿತು. 
 
ಈ ಆದೇಶವನ್ನು ಪ್ರಶ್ನಿಸಿ ಸಿಂಗ್ ಕಾರ್ಮಿಕ ಕೋರ್ಟ್‌ನಲ್ಲಿ  ಅರ್ಜಿ ಸಲ್ಲಿಸಿದರು. 1990ರಲ್ಲಿ ಸಿಂಗ್ ಪರವಾಗಿ ತೀರ್ಪು ನೀಡಿದ ನ್ಯಾಯಾಲಯ, ಪೂರ್ಣ ವೇತನದೊಂದಿಗೆ ಅವರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳುವಂತೆ ತೀರ್ಪು ನೀಡಿತು. ಆದರೆ, ಸಾರಿಗೆ ಇಲಾಖೆ ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ  ಮೇಲ್ಮನಿ ಸಲ್ಲಿಸಿತು. 
 
ಆದರೆ, ಹೈಕೋರ್ಟ್‌ನಲ್ಲೂ ಸಂಸ್ಥೆಯ ವಾದಕ್ಕೆ ಮನ್ನಣೆ ದೊರೆಯಲಿಲ್ಲ, 2008ರಲ್ಲಿ ಕೋರ್ಟ್, ಸಂಸ್ಥೆಯ ಮನವಿಯನ್ನು ತಿರಸ್ಕರಿಸಿತು.
 
ಅದಾಗಲೇ ಎರಡು ದಶಕಗಳು ಉರುಳಿ ಹೋಗಿತ್ತು. ಸಿಂಗ್  ಸೇವೆಯಿಂದ ನಿವೃತ್ತಿಯಾಗಿದ್ದರು. ಹೀಗಾಗಿ ನಿವೃತ್ತಿ ನಂತರದ ಭತ್ಯೆ ಹಾಗೂ ಹಿಂದಿನ ಬಾಕಿ ವೇತನ ಪಾವತಿಸಬೇಕೆಂಬ ಸಿಂಗ್ ಇಲಾಖೆಯ ಮುಂದೆ ಕೋರಿಕೆ ಸಲ್ಲಿಸಿದರು . ಆದರೆ  ಸಾರಿಗೆ ಸಂಸ್ಥೆ ಅವರ ಬೇಡಿಕೆಯನ್ನು ಪುರಸ್ಕರಿಸಲಿಲ್ಲ. ತಾನು ನೀಡಿರುವ ತೀರ್ಪನ್ನು ಮರುಪರೀಶಿಲಿಸುವಂತೆ ಅದು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಜತೆಗೆ, ಸಿಂಗ್ ಅವರನ್ನು ವಜಾಗೊಳಿಸಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅದು ಬಾಕಿ ವೇತನ ನೀಡುವುದಿಲ್ಲ ಎಂದು ಹೇಳಿದ್ದು, ಮತ್ತೆ ಪ್ರಕರಣ ಕೋರ್ಟ ಮೆಟ್ಟಿಲೇರಿದೆ.
 
ಆಗಸ್ಟ್ 12ರಂದು ಅರ್ಜಿ ಪರಿಶೀಲಿಸಲಿರುವ ಹೈಕೋರ್ಟ್ ನ್ಯಾಯಾಧೀಶೆ ಹೀಮಾ ಕೊಹ್ಲಿ , ಸಿಂಗ್  ಅವರ ಅದೃಷ್ಟ, ದುರಾದೃಷ್ಟವನ್ನು ನಿರ್ಧರಿಸಲಿದ್ದಾರೆ. 

ವೆಬ್ದುನಿಯಾವನ್ನು ಓದಿ