ದೆಹಲಿ ಜಲ ಸಂಪನ್ಮೂಲ ಸಚಿವ ಕಪಿಲ್ ಮಿಶ್ರಾಗೆ ಬೆದರಿಕೆ ಕರೆ

ಗುರುವಾರ, 18 ಫೆಬ್ರವರಿ 2016 (16:57 IST)
ರಾಷ್ಟ್ರ ರಾಜಧಾನಿಯ ಜಲ ಸಂಪನ್ಮೂಲ ಖಾತೆ ಸಚಿವ ಕಪಿಲ್ ಮಿಶ್ರಾ ಅವರಿಗೆ ಬೆದರಿಕೆ ಕರೆ ಬಂದಿದ್ದು ಈ ಕುರಿತು ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ಇಂದು(ಗುರುವಾರ) ಮುಂಜಾನೆ 8.44ರ ಸುಮಾರಿಗೆ ನನ್ನ ಮೊಬೈಲ್‌ಗೆ +3844 ಸಂಖ್ಯೆಯ ದೂರವಾಣಿ ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದಾತ ತನ್ನ ಹೆಸರು ಪೂಜಾರಿ ಎಂದು ಹೇಳಿಕೊಂಡಿದ್ದು ನಿಮ್ಮ ಬಾಯಿಯನ್ನು ಮುಚ್ಚಿಕೊಂಡಿರಿ, ಇಲ್ಲವಾದರೆ ಗುಂಡು ಹಾರಿಸಿ ಕೊಲ್ಲುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಕಾಲ್ ಟ್ರೇಸ್ ಮಾಡಿ, ಆರೋಪಿಯನ್ನು ಬಂಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ ಎಂದು ಅವರು ರಾಜನಾಥ್ ಸಿಂಗ್ ಬಳಿ ಪತ್ರ ಬರೆದು ಕೇಳಿಕೊಂಡಿದ್ದಾರೆ. 
 
ಅದೇ ಸಂಖ್ಯೆಯನ್ನು ಹೋಲುವ  ಅನೇಕ ಸಂಖ್ಯೆಗಳಿಂದ (+4432, +3844, +9100, +501 ಇತ್ಯಾದಿ) ಕೂಡ ನನಗೆ ಕರೆ ಬಂದಿದ್ದು, ನಾನು ಆ ಕರೆಗಳನ್ನು ಸ್ವೀಕರಿಸಿಲ್ಲ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. 
 
ಈ ವಿಷಯವನ್ನು ನಿಮ್ಮ ಅರಿವಿಗೆ ತರುವುದು ಅವಶ್ಯಕ ಎಂದುಕೊಂಡಿದ್ದೇನೆ.  ಈ ದೂರವಾಣಿ ಕರೆಯನ್ನು ಟ್ರೇಸ್ ಮಾಡಿ, ಆರೋಪಿಗಳನ್ನು ಬಂಧಿಸುವಂತೆ ನೀವು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತಿರಿ ಎಂದುಕೊಂಡಿದ್ದೇನೆ ಎಂದು ಮಿಶ್ರಾ ಸಿಂಗ್ ಅವರಲ್ಲಿ ಕೇಳಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ