ನೋಟು ನಿಷೇಧ ಅವ್ಯವಸ್ಥೆ ಮರಳಿ ಅಧಿಕಾರಕ್ಕೆ ಬರಲು ಸಹಾಯ : ಅಖಿಲೇಶ್ ಯಾದವ್

ಬುಧವಾರ, 21 ಡಿಸೆಂಬರ್ 2016 (15:51 IST)
ನೋಟು ನಿಷೇಧ ಅವ್ಯವಸ್ಥೆ ತಾವು ಮರಳಿ ಅಧಿಕಾರಕ್ಕೆ ಬರಲು ಸಹಾಯ ಮಾಡಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ. 

ಪಿಟಿಐಗೆ ಸಂದರ್ಶನ ನೀಡಿ ಮಾತನಾಡುತ್ತಿದ್ದ ಅಖಿಲೇಶ್, ತಮ್ಮ ಕುಟುಂಬದಲ್ಲಿ ನಡೆದ ಯಾದವೀಕಲಹ ಚುನಾವಣೆಯ ಮೇಲೆ ಪರಿಣಾಮ ಬೀರಲ್ಲ. ನೋಟು ನಿಷೇಧದ ಬಳಿಕ ಎಲ್ಲ ಸಂಗತಿಗಳು ಬದಲಾಗಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 
 
"ಕುಟುಂಬ ಕಲಹ ಹಳೆಯ ವಿಷಯ. ಚುನಾವಣೆಯನ್ನು ಗೆಲ್ಲಲು ನಾವು ಜತೆಯಾಗಿ ಕೆಲಸ ಮಾಡುತ್ತೇವೆ. ನೋಟು ನಿಷೇಧದ ಬಳಿಕ ಎಲ್ಲವೂ ಬದಲಾಗಿದೆ. ಮತ್ತೀಗ ಯಾರು ಕೂಡ ನಮ್ಮ ಕುಟುಂಬದಲ್ಲಿ ನಡೆದ ಜಗಳವನ್ನು ನೆನಪಿಟ್ಟುಕೊಂಡಿಲ್ಲ. ಎಲ್ಲ ವಿಷಯಗಳನ್ನು ಹಿಂದಕ್ಕೆ ತಳ್ಳಿ ನೋಟು ನಿಷೇಧ ಪ್ರಮುಖ ವಿಷಯವಾಗಿ ಹೊರ ಹೊಮ್ಮಿದೆ", ಎಂದು ಅವರು ಹೇಳಿದ್ದಾರೆ. 
 
ಉತ್ತರ ಪ್ರದೇಶದಲ್ಲಿ ಜಾತಿ ರಾಜಕಾರಣ ನಡೆಯುವುದಿಲ್ಲ. ತಾವು ಮಾಡಿರುವ ಕೆಲಸ ಮತ್ತು ತಮಗಿರುವ ವರ್ಚಸ್ಸಿಗೆ ಜನರು ಓಟು ನೀಡಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. 
 
"ಕಳೆದ 5 ವರ್ಷಗಳಲ್ಲಿ ನಾವು ಮಾಡಿರುವ ಜನೋಪಕಾರದ ಕೆಲಸ ಮತ್ತು ನೋಟು ನಿಷೇಧದಿಂದಾಗಿ ಜನ ಎದುರಿಸುತ್ತಿರುವ ಸಮಸ್ಯೆ ನಮ್ಮನ್ನು ಗೆಲುವಿನ ಕಡೆಗೆ ಕೊಂಡೊಯ್ಯಲಿದೆ. ಇಂದು ಎಟಿಎಂ ಮುಂದೆ ನಿಂತಿರುವ ಉದ್ದದ ಸಾಲು ಮತಗಟ್ಟೆಗಳಲ್ಲಿ ಸಹ ಕಂಡು ಬರಲಿದೆ" ಎಂಬ ನಂಬಿಕೆಯನ್ನು ಅವರು ವ್ಯಕ್ತ ಪಡಿಸಿದ್ದಾರೆ.
 
ಬಿಜೆಪಿ ಮತ್ತು ಬಿಎಸ್‌ಪಿ ನಡುವೆ ನಿಮಗೆ ದೊಡ್ಡ ಶತ್ರು ಯಾರು ಎಂದು ಕೇಳಲಾಗಿ ಉತ್ತರ ಪ್ರದೇಶದ ಜನರು ಎರಡು ಪಕ್ಷಗಳ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ