ಡೆನ್ಮಾರ್ಕ್ ಓಪನ್ ಸೂಪರ್ ಸಿರೀಸ್: ಫೈನಲ್‌ಗೆ ಲಗ್ಗೆ ಇಟ್ಟ ಪಿವಿ ಸಿಂಧು

ಭಾನುವಾರ, 18 ಅಕ್ಟೋಬರ್ 2015 (11:58 IST)
ಭಾರತದ ಭರವಸೆಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು, ಚೊಚ್ಚಲ ಬಾರಿಗೆ ಡೆನ್ಮಾರ್ಕ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದಾರೆ. 

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ವಿಶ್ವ ನಂಬರ್ 13ನೇ ಶ್ರೇಯಾಂಕಿತೆ ಸಿಂಧು, ಕಠಿಣ ಸ್ಪರ್ಧಿ ಕ್ಯಾರೊಲಿನ್‌ ಮರಿನ್‌ ಅವರನ್ನು ಮಣಿಸಿದರು. ಜಿದ್ದಾಜಿದ್ದಿನ ಹೋರಾಟದಲ್ಲಿ ಸಿಂಧು 21-15, 18-21, 21-17 ಅಂಕಗಳಿಂದ ಗೆಲುವಿನ ನಗೆ ಬೀರಿದರು. ದ್ವಿತೀಯ ಶ್ರೇಯಾಂಕಿತೆ ಕ್ಯಾರೊಲಿನ್ ಬಲಿಷ್ಠ ಆಟಗಾರ್ತಿ ಎನಿಸಿದ್ದು ಗೆಲುವಿನ ಫೇವರೇಟ್ ಎನಿಸಿದ್ದರು. ಆದರೆ, ಸಿಂಧು ಅವರ ಚುರುಕಿನ ಆಟದ ಮುಂದೆ ಕ್ಯಾರೊಲಿನ್‌ ಸೋಲೊಪ್ಪಿಕೊಳ್ಳ ಬೇಕಾಯಿತು.
 
20 ವರ್ಷದ ಹೈದರಾಬಾದ್ ಆಟಗಾರ್ತಿಗೆ ಸ್ಪೇನ್ ಆಟಗಾರ್ತಿ ಕ್ಯಾರೊಲಿನ್‌ ವಿರುದ್ಧ ಎರಡನೆಯ ಗೆಲುವಾಗಿದ್ದು, ಈ ಹಿಂದೆ 2011ರ ಮಾಲ್ಡೀವ್ಸ್ ಇಂಟರ್​ನ್ಯಾಷನಲ್ ಚಾಲೆಂಜ್​ನಲ್ಲಿ ಸಿಂಧು ಕ್ಯಾರೋಲಿನ್ ಅವರನ್ನು ಮಣಿಸಿದ್ದರು.
 
ಸಿಂಧು ಡೆನ್ಮಾರ್ಕ್ ಓಪನ್​ನಲ್ಲಿ ಭಾರತದ ಸವಾಲು ಉಳಿಸಿಕೊಂಡಿರುವ ಏಕೈಕ ಸ್ಪರ್ಧಿಯಾಗಿದ್ದಾರೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸಿಂಧು, ವಿಶ್ವ ನಂ.4, ಚೀನಾದ ಲೀ ಕ್ಸುರಿ ವಿರುದ್ಧ ಹೋರಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ