ಆಜಂ ಖಾನ್‌ಗೆ ಒದೆಕೊಟ್ಟು ಮನೆಯಲ್ಲಿ ಕೂರಿಸಿ: ಶಿವಸೇನಾ

ಬುಧವಾರ, 7 ಅಕ್ಟೋಬರ್ 2015 (12:05 IST)
ದಾದ್ರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿಶ್ವಸಂಸ್ಥೆಗೆ ಪತ್ರ ಬರೆದಿರುವ ಉತ್ತರ ಪ್ರದೇಶದ ಸಚಿವ ಆಜಂ ಖಾನ್ ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತ ಪಡಿಸಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ, 'ಆಜಂ ಖಾನ್ ವಜಾ ಮಾಡಿ' ಎಂಬ ಶೀರ್ಷಿಕೆಯಲ್ಲಿ  ಬರೆದಿರುವ ಸಂಪಾದಕೀಯದಲ್ಲಿ, ಮುಲಾಯಂ ಸಿಂಗ್ ಅವರ ರಕ್ತದಲ್ಲಿ ಅಲ್ಪವಾದರೂ ದೇಶ ಭಕ್ತಿ ಉಳಿದಿದೆ ಎಂದಾದರೆ ಅವರು ಆಜಂ ಖಾನ್ ಪಾರ್ಶ್ವ ಭಾಗಕ್ಕೆ ಒದೆ ಕೊಟ್ಟು ಮನೆಯಲ್ಲಿ ಕೂರಿಸಬೇಕು', ಎಂದು ಸೇನೆ ಕಿಡಿಕಾರಿದೆ.

ಖಾನ್ ಮೇಲಿನ ಅಸಮಾಧಾನವನ್ನು ಮುಂದುವರೆಸುತ್ತ , 'ಪಾಕಿಸ್ತಾನದಲ್ಲಿ ಹಿಂದೂಗಳ ಅತಿ ಹೀನಾಯ ಸ್ಥಿತಿಯ ಬಗ್ಗೆ ಆಜಂ ಯಾಕೆ ಬರೆಯುವುದಿಲ್ಲ. ನಮ್ಮ ಸ್ಥಳೀಯ ಸಮಸ್ಯೆಗಳ ಬಗ್ಗೆ ವಿಶ್ವಸಂಸ್ಥೆಗೆ ದೂರುವ ಮೂಲಕ ಖಾನ್ ರಾಷ್ಟ್ರ ವಿರೋಧಿತನವನ್ನು ತೋರಿದ್ದಾರೆ. ಸಂವಿಧಾನಬದ್ಧ ಸ್ಥಾನದಲ್ಲಿರಲು ಅವರು ಯೋಗ್ಯರಲ್ಲ', ಎಂದು ಸಾಮ್ನಾ ಪ್ರತಿಪಾದಿಸಿದೆ. 
 
ಏತನ್ಮಧ್ಯೆ, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಖಾನ್, 'ಕಾಶ್ಮೀರದ ಸಮಸ್ಯೆಯನ್ನು ಭಾರತ ವಿಶ್ವಸಂಸ್ಥೆಯಲ್ಲಿ ಎತ್ತುತ್ತದೆ ಎಂದರೆ ಅಮಾಯಕನೊಬ್ಬನ ಹತ್ಯೆ ಪ್ರಕರಣವನ್ನು ಯಾಕೆ ವಿಶ್ವ ಸಂಸ್ಥೆಗೆ ಕೊಂಡೊಯ್ಯಬಾರದು', ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ