ಅಭಿವೃದ್ಧಿಯೊಂದೇ ಎಲ್ಲ ಸಮಸ್ಯೆಗೂ ಪರಿಹಾರ: ಮೋದಿ

ಸೋಮವಾರ, 31 ಆಗಸ್ಟ್ 2015 (17:59 IST)
ತಮ್ಮ ತವರು ರಾಜ್ಯದಲ್ಲಿ ಪಟೇಲ್ ಸಮುದಾಯ ಕೈಗೊಂಡಿರುವ ಮೀಸಲಾತಿ ಹೋರಾಟ ಪ್ರಧಾನಿ ನರೇಂದ್ರ ಮೋದಿಯವರ ನಿದ್ದೆಗೆಡಿಸಿದ್ದರೂ, ಗುಜರಾತ್‌ನಲ್ಲಿ ಆದಷ್ಟು ಬೇಗ ಶಾಂತಿ ಮರಳಲಿದೆ ಎಂದು ಅವರು ಭರವಸೆಯನ್ನು ವ್ಯಕ್ತ ಪಡಿಸಿದ್ದಾರೆ. ಜತೆಗೆ ಅಭಿವೃದ್ಧಿಯೊಂದೇ ಎಲ್ಲ ಸಮಸ್ಯೆಗೂ ಪರಿಹಾರ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 

ಕನಿಷ್ಠ 10 ಜನರ ಸಾವಿಗೆ ಕಾರಣವಾದ ಹಿಂಸಾಚಾರ ಇಡೀ ದೇಶಕ್ಕೆ ನೋವನ್ನು ತಂದಿಟ್ಟಿದೆ ಎಂದು ಖೇದ ವ್ಯಕ್ತ ಪಡಿಸಿದ ಮೋದಿ, "ಗುಜರಾತಿನಲ್ಲಿ ಇತ್ತೀಚಿಗೆ ನಡೆಯುತ್ತಿರುವ ಹಿಂಸಾಚಾರದ ಘಟನೆಗಳು ಸಂಪೂರ್ಣ ದೇಶಕ್ಕೆ ನೋವು ತಂದಿಟ್ಟಿದೆ.  ಮಹಾತ್ಮಾ ಗಾಂಧಿ ಮತ್ತು ಸರ್ದಾರ್ ಪಟೇಲ್ ನಾಡಿನಲ್ಲಿ ಇಂತಹದ್ದು ಏನು ನಡೆದರೂ ಇಡೀ ದೇಶ ಆಘಾತಕ್ಕೆ ಒಳಗಾಗುತ್ತದೆ ಮತ್ತು ನೋವನ್ನು ಅನುಭವಿಸುತ್ತದೆ", ಎಂದು ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್‌ನಲ್ಲಿ ಹೇಳಿದ್ದಾರೆ. 
 
ಕೇವಲ ಅಭಿವೃದ್ಧಿಯೊಂದೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದ ಅವರು ಈ ದಿಶೆಯಲ್ಲಿ ಕಾರ್ಯ ಪ್ರವೃತ್ತರಾಗುವಂತೆ ದೇಶದ ಜನರಲ್ಲಿ ಕೇಳಿಕೊಂಡಿದ್ದಾರೆ. 
 
'ಶಾಂತಿ, ಒಗ್ಗಟ್ಟು ಮತ್ತು ಸಹೋದರತೆ ಮಾತ್ರ ಸರಿಯಾದ ಹಾದಿಗಳು. ವಿಕಾಸದ ಪಥದಲ್ಲಿ ನಾವೆಲ್ಲರೂ ಜತೆಯಾಗಿ ನಡೆಯಬೇಕು. ಇದೊಂದೇ ನಮ್ಮೆಲ್ಲರ ಸಮಸ್ಯೆಗಳಿಗೆ ಪರಿಹಾರ', ಎಂದು ಅವರು ಹೇಳಿದ್ದಾರೆ. 
 
ಸನ್ನಿವೇಶವನ್ನು ನಿಯಂತ್ರಿಸುವಲ್ಲಿ ಗುಜರಾತ್ ನಾಗರಿಕರ ಸಹಕಾರ ಬಹುಮುಖ್ಯ ಪಾತ್ರ ವಹಿಸಿತು ಎಂದು 12 ವರ್ಷ ಮುಖ್ಯಮಂತ್ರಿಯಾಗಿ ಗುಜರಾತ್ ರಾಜ್ಯವನ್ನಾಳಿದ ಮೋದಿ ತಮ್ಮ ತವರು ರಾಜ್ಯದ ಜನರನ್ನು ಪ್ರಶಂಸಿಸಿದ್ದಾರೆ.

ವೆಬ್ದುನಿಯಾವನ್ನು ಓದಿ