ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವಿಸ್‌ ಆಯ್ಕೆ ಬಹುತೇಕ ಖಚಿತ

ಶನಿವಾರ, 25 ಅಕ್ಟೋಬರ್ 2014 (14:28 IST)
ಮಹಾರಾಷ್ಟ್ರ ಬಿಜೆಪಿ ಶಾಸಕರ ಸಭೆ ಸೋಮವಾರ ನಡೆಯುವ ಸಾಧ್ಯತೆ ಇದ್ದು, ಸರ್ಕಾರ ರಚನೆ ಪ್ರಕ್ರಿಯೆ ತ್ವರಿತಗೊಳ್ಳುವ ಲಕ್ಷಣಗಳು ಕಾಣುತ್ತಿವೆ. ‘ದೀಪಾವಳಿ ನಂತರವೇ ಸರ್ಕಾರ ರಚನೆ ಪ್ರಕ್ರಿಯೆ ಶುರುವಾಗುತ್ತದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ದೇವೇಂದ್ರ ಫಡ್ನವಿಸ್‌  ಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ’ ಎಂದು ಪಕ್ಷದ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
 
ಉದ್ಧವ್‌ ಉತ್ಸಾಹ: ಬಿಜೆಪಿ ಜತೆ ಸರ್ಕಾರ ರಚಿಸುವುದಕ್ಕೆ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ  ತೀವ್ರ ಉತ್ಸುಕರಾಗಿದ್ದಾರೆ ಎಂದು ಆರ್‌ಪಿಐ ಮುಖಂಡ ರಾಮದಾಸ್‌ ಅಠಾವಳೆ  ಹೇಳಿದ್ದಾರೆ. ಅಠಾವಳೆ ಶುಕ್ರವಾರ ಉದ್ಧವ್‌ ಠಾಕ್ರೆ ಅವರನ್ನು ಭೇಟಿಯಾಗಿದ್ದರು. ಆದರೆ, ಹಳೆಯ ಮಿತ್ರ ಸೇನಾ ಮುಂದಿಟ್ಟಿರುವ ಪ್ರಸ್ತಾವಗಳಿಗೆ ಬಿಜೆಪಿ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.
 
‘ದೀಪಾವಳಿ ನಂತರ ಬಿಜೆಪಿ  ಶಾಸ­ಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡ­ಲಾಗುತ್ತದೆ. ಕೇಂದ್ರದ ವೀಕ್ಷಕ ರಾಜನಾಥ್‌ ಸಿಂಗ್‌ ಇಲ್ಲಿಗೆ ಬರುತ್ತಾರೆ. ಅವರ ಸಮ್ಮುಖದಲ್ಲಿಯೇ ಮುಖ್ಯ­ಮಂತ್ರಿ ಆಯ್ಕೆ ನಡೆಯಲಿದೆ’ ಎಂದೂ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
 
‘ಸಚಿವ ಸಂಪುಟದಲ್ಲಿ ಯಾರೆಲ್ಲಾ ಇರು-ತ್ತಾರೆ ಎನ್ನುವುದನ್ನು ನಿರ್ಧರಿಸಲಾಗುತ್ತಿದೆ. ಬಿಜೆಪಿ ಶಾಸಕರನ್ನು ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ಈವರೆಗೆ ಗಮನ ಹರಿಸಲಾಗಿದೆ’ ಎಂದ ಅವರು ಸಂಪುಟದಲ್ಲಿ ಶಿವಸೇನಾಗೆ ಸ್ಥಾನ ಸಿಗಲಿದೆಯೇ ಎನ್ನುವುದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
 
ಬಿಜೆಪಿಗೆ ಬೇಷರತ್‌ ಬಾಹ್ಯ ಬೆಂಬಲ ನೀಡಲು ಎನ್‌ಸಿಪಿ ಮುಂದಾಗಿದೆ. ಇಂಥ ಸಂದರ್ಭದಲ್ಲಿ  ಬಿಜೆಪಿಗೆ ನಿರ್ದೇಶನ ನೀಡುವ ಸ್ಥಿತಿಯಲ್ಲಿ ಶಿವಸೇನಾ ಇಲ್ಲ ಎಂಬ ಮಾತು ಕೂಡ  ಕೇಳಿಬರುತ್ತಿದೆ. ಈ ನಡುವೆ,  ಪಕ್ಷೇತರರು ಹಾಗೂ ಸಣ್ಣ ಪಕ್ಷಗಳ ಬೆಂಬಲ ಪಡೆಯುವುದಕ್ಕೆ ಬಿಜೆಪಿ ಪ್ರಯತ್ನ ನಡೆಸುತ್ತಿದೆ.
 
‘ಇಲ್ಲಿಯವರೆಗೆ ನಮಗೆ ಏಳು ಪಕ್ಷೇತರರು ಹಾಗೂ ಮೂವರು ಸದಸ್ಯರನ್ನೊಳಗೊಂಡ ಬಹುಜನ್‌ ವಿಕಾಸ್‌ ಅಘಡಿ ಬೆಂಬಲ ಸಿಕ್ಕಿದೆ. ಮೂವರು ಶಾಸಕರನ್ನು ಹೊಂದಿರುವ ಪಿಡಬ್ಲುಪಿ ಜತೆ ಕೂಡ ಮಾತುಕತೆ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.

ವೆಬ್ದುನಿಯಾವನ್ನು ಓದಿ