ಧೋನಿಗೆ ದ್ರೋಹ: ಬಯಲಾಯ್ತು ವಿದಾಯದ ರಹಸ್ಯ

ಮಂಗಳವಾರ, 10 ಜನವರಿ 2017 (11:13 IST)
ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ, ಏಕದಿನ ಮತ್ತು ಟಿ20 ವಿಭಾಗದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದು ಅವರ ಅಭಿಮಾನಿಗಳಲ್ಲಿ ಹೇಳತೀರದಷ್ಟು ನಿರಾಸೆಯನ್ನು ತಂದಿಟ್ಟಿದೆ. ಮತ್ತೀಗ ಅವರು ಸ್ವಯಂ ಇಚ್ಛೆಯಿಂದ ನಾಯಕತ್ವವನ್ನು ತ್ಯಜಿಸಿಲ್ಲ. ಅವರಿಗೆ ಒತ್ತಡ ಹೇರಲಾಗಿತ್ತು ಎಂಬ ಆರೋಪ ಕೇಳಿ ಬರುತ್ತಿದೆ.
ಹೌದು, ಈ ನಿರ್ಧಾರದ ಹಿಂದೆ ಬಿಸಿಸಿಐ ಬಿಗ್ ಬಾಸ್‌ಗಳ ಕೈವಾಡವಿದೆ. ನಾಯಕತ್ವಕ್ಕೆ ವಿದಾಯ ಹೇಳಲು ಧೋನಿಗೆ ಸುತಾರಾಂ ಇಚ್ಛೆ ಇರಲಿಲ್ಲ ಎಂಬ ಮಾತುಗಳು ಕೇಳಿ ಬಂದಿದೆ. ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾಹಿ ಹೇಳಿದ್ದ ಮಾತುಗಳು ಕೂಡ ಇದನ್ನು ಪುಷ್ಟೀಕರಿಸುತ್ತವೆ.
 
ಧೋನಿಯ ನಾಯಕತ್ವ ವಿದಾಯ ಸ್ವಾಭಾವಿಕವಲ್ಲ. ಬದಲಾಗಿ ಬಿಸಿಸಿಐ ಜಂಟಿ ಕಾರ್ಯದರ್ಶಿ ಅಮಿತಾಭ್ ಚೌಧರಿಯ ಒತ್ತಡ ಧೋನಿ ಈ ನಿರ್ಧಾರ ಕೈಗೊಳ್ಳಲು ಕಾರಣ. ಧೋನಿಯನ್ನು ಕೆಳಗಿಳಿಸಲು ಒಂದು ತಿಂಗಳ ಹಿಂದೆಯೇ ಸ್ಕೆಚ್ ಹಾಕಲಾಗಿತ್ತು ಎಂದು ಬಿಹಾರ್ ಕ್ರಿಕೆಟ್ ಸಂಸ್ಥೆಯ (ಬಿಸಿಎ) ಕಾರ್ಯದರ್ಶಿ ಆದಿತ್ಯ ವರ್ಮಾ ಹೊಸ ಬಾಂಬ್ ಸಿಡಿಸಿದ್ದಾರೆ. 
 
ಧೋನಿ ಮೆಂಟರ್ ಆಗಿದ್ದ ಜಾರ್ಖಂಡ್ ತಂಡ ರಣಜಿ ಟ್ರೋಫಿ ಸೆಮಿಫೈನಲ್​ನಲ್ಲಿ ಸೋತಿದ್ದರಿಂದ  ತೀವ್ರ ಅಸಮಾಧಾನಗೊಂಡಿದ್ದ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಯ(ಜೆಎಸ್​ಸಿಎ) ಅಧ್ಯಕ್ಷರೂ ಆಗಿರುವ ಅಮಿತಾಭ್ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್​ಗೆ ಕರೆ ಮಾಡಿ ಧೋನಿಯ ‘ ಭವಿಷ್ಯದ ಯೋಜನೆ’ ಏನು ಎಂಬ ಬಗ್ಗೆ ಕೇಳುವಂತೆ ಸೂಚಿಸಿದ್ದರು. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಧೋನಿ ಅದೇ ದಿನ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಆದಿತ್ಯ ವರ್ಮಾ ಹೇಳಿದ್ದಾರೆ. ಜತೆಗೆ ಬಿಸಿಸಿಐ ಇದನ್ನು ಅಲ್ಲಗಳೆಯಲಿ ನೋಡೋಣ ಎಂದು ಅವರು ಸವಾಲೆಸೆದಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸಿರುವ ಎಂಎಸ್ ಕೆ ಪ್ರಸಾದ್, ಸೀಮಿತ ಓವರ್ ಗಳ ಪಂದ್ಯಗಳ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸುವಂತೆ ಧೋನಿಗೆ ಸೂಚಿಸಿರಲಿಲ್ಲ ಎಂದಿದ್ದಾರೆ.
 
“ಇದು ಸಂಪೂರ್ಣ ಧೋನಿಯದ್ದೇ ನಿರ್ಧಾರ. ಅದಕ್ಕೆ ನಾವು ಅಭಾರಿಯಾಗಿದ್ದೇವೆ. ಅವರು ಭಾರತೀಯ ಕ್ರಿಕೆಟ್ ಹಿತ ದೃಷ್ಟಯಿಂದ ತೆಗೆದುಕೊಂಡ ನಿರ್ಧಾರವನ್ನು ಗೌರವಿಸುತ್ತೇವೆ” ಎಂದು ಪ್ರಸಾದ್ ಹೇಳಿದ್ದಾರೆ.
 
ಹಿಂದೆಯೂ ಪ್ರಮುಖ ಹಿರಿಯ ಆಟಗಾರರ ನಿವೃತ್ತಿ ವಿಚಾರದಲ್ಲಿ ಇಂತಹ ವಿವಾದಗಳು ಎದ್ದಿತ್ತು. ಅದರಲ್ಲೂ ವಿಶೇಷವಾಗಿ ಸಚಿನ್ ತೆಂಡುಲ್ಕರ್ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ಹೇಳಿದ್ದಕ್ಕೆ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದರು ಎಂಬ ವಿವಾದ ಸೃಷ್ಟಿಯಾಗಿತ್ತು. ಆದರೆ ತೆಂಡುಲ್ಕರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
 

ವೆಬ್ದುನಿಯಾವನ್ನು ಓದಿ