ನಾನೇನು ತಪ್ಪು ಮಾಡಿಲ್ಲ: ಸುಷ್ಮಾ ಸ್ವರಾಜ್

ಸೋಮವಾರ, 3 ಆಗಸ್ಟ್ 2015 (12:46 IST)
ಲಲಿತ್‌‌ ಮೋದಿ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸದನದಲ್ಲಿ ಮಾತನಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಲಲಿತ್ ಮೋದಿಗೆ ಸಹಾಯ ಮಾಡುವ ಉದ್ದೇಶದೊಂದಿಗೆ ತಾವು ಬ್ರಿಟನ್ ಸರ್ಕಾರದೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ, ನನ್ನ ವಿರುದ್ಧದ ಆರೋಪಗಳೆಲ್ಲ ಆಧಾರ ರಹಿತ", ಎಂದು ಹೇಳಿದ್ದಾರೆ.

ರಾಜೀನಾಮೆ ನೀಡುವಂತೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ನಡೆಸುತ್ತಿದ್ದ ಕೋಲಾಹಲದ ನಡುವೆ ಇದೇ ಮೊದಲ ಬಾರಿಗೆ ಸದನದಲ್ಲಿ ಆರೋಪಕ್ಕೆ ಸ್ಪಷ್ಟೀಕರಣ ನೀಡಲು ಯತ್ನಿಸಿದ ಸ್ವರಾಜ್, "ಲಲಿತ್ ಮೋದಿ ಅವರಿಗೆ ವೀಸಾ ನೀಡುವಂತೆ ಬ್ರಿಟನ್ ಸರ್ಕಾರಕ್ಕೆ ಮನವಿ ಮಾಡಿಲ್ಲ. ನಾನು ಯಾವ ತಪ್ಪು ಮಾಡಿಲ್ಲ. ಪ್ರತಿಪಕ್ಷಗಳು ನನ್ನ ವಿರುದ್ಧ ಆಧಾರ ವಿಲ್ಲದ ಆರೋಪ ಮಾಡುತ್ತಿವೆ",  ಎಂದು ಹೇಳಿದ್ದಾರೆ. ಅವರು ತಮ್ಮ ತಪ್ಪಿಲ್ಲ ಎನ್ನುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಕೋಪೋದ್ರಿಕ್ತರಾಗಿ ಸರಕಾರ ಮತ್ತು ಸುಷ್ಮಾ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. 'ಮಾತು ಸಾಕು, ಅಭಿವೃದ್ಧಿ ಕೆಲಸ ಬೇಕು' ಎಂದು ಪ್ರತಿಪಕ್ಷಗಳು ಘೋಷಣೆ ಕೂಗಿದರು.
 
"ಈ ಕುರಿತಂತೆ ನಾನು ಚರ್ಚೆಗೆ ಸಿದ್ಧಳಾಗಿದ್ದೇನೆ. ಪ್ರತಿದಿನ ರಾಜ್ಯಸಭೆಗೆ ಹಾಜರಾಗಿದ್ದೇನೆ. ಆದರೆ ಚರ್ಚೆಗೆ ನೀವೇ ಅವಕಾಶ ನೀಡುತ್ತಿಲ್ಲ. ಕೋಲಾಹಲ ಸೃಷ್ಟಿಸಿ ಕಲಾಪವನ್ನು  ಹಾಳುಗೆಡವುತ್ತಿದ್ದೀರಿ", ಎಂದು ಸುಷ್ಮಾ ಆರೋಪಿಸಿದ್ದಾರೆ.
 
ಕಲಾಪ ಆರಂಭವಾಗುತ್ತಿದ್ದಂತೆ ಸುಷ್ಮಾ ರಾಜೀನಾಮೆಗೆ ಒತ್ತಾಯಿಸಿ ವಿರೋಧಪಕ್ಷಗಳು ಪ್ರತಿಭಟನೆ ನಡೆಸಿದವು. ಗದ್ದಲದ ನಡುವೆಯೂ ಸುಷ್ಮಾ ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದರು. ಆದರೆ ಅವರು ತಮ್ಮ ತಪ್ಪಿಲ್ಲ ಎನ್ನುತ್ತಿದ್ದಂತೆ ವಿರೋಧ ಪಕ್ಷಗಳ ಗಲಾಟೆ ಮಿತಿ ಮೀರಿತು. ಸದನ ಬಾವಿಗಿಳಿದ ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದವು. 
 
ಕೋಲಾಹಲ ನಿಯಂತ್ರಣಕ್ಕೆ ಬರದಿದ್ದಾಗ ಸ್ಪೀಕರ್ ಕಲಾಪವನ್ನು ಮುಂದೂಡಿದರು. ಲೋಕಸಭೆಯಲ್ಲಿ ಸಹ ಎಂದಿನಂತೆ ಲಲಿತ್ ಗೇಟ್ ಹಗರಣ ಪ್ರತಿಧ್ವನಿಸಿತು. ವಿರೋಧ ಪಕ್ಷಗಳ ಗಲಾಟೆ ತಾರಕಕ್ಕೇರಿದಾಗ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಮುಂದೂಡಿದರು. 
 
 
ಈ ನಡುವೆ ಸದನ ಗೊಂದಲದ ಗೂಡಾಗಿ ಪರಿವರ್ತನೆ ಆಗುತ್ತಿದ್ದಂತೆ ಸ್ಪೀಕರ್ ಕಲಾಪವನ್ನು ಮುಂದೂಡಿದ್ದಾರೆ. ನಡುವೆಯೇ ಲೋಕಸಭೆಯನ್ನೂ  ಮುಂದೂಡಲಾಯಿತು.

ವೆಬ್ದುನಿಯಾವನ್ನು ಓದಿ