ಗೋಮಾಂಸ ಸೇವನೆಗೆ ಸಲಹೆ ಮಾಡಿಲ್ಲ, ಅಥ್ಲೀಟ್‌ಗಳಿಗೆ ಸ್ಫೂರ್ತಿ ತುಂಬಿದೆ: ಉದಿತ್ ರಾಜ್

ಮಂಗಳವಾರ, 30 ಆಗಸ್ಟ್ 2016 (16:14 IST)
ತಾವು ಗೋಮಾಂಸ ಸೇವಿಸುವಂತೆ ಸಲಹೆ ಮಾಡಿಲ್ಲ ಎಂದು ಬಿಜೆಪಿ ಸಂಸದ ಉದಿತ್ ರಾಜ್ ಸ್ಪಷ್ಟಪಡಿಸಿದ್ದಾರೆ.  ವೇಗದ ಓಟಗಾರ ಉಸೇನ್ ಬೋಲ್ಟ್ ಕೋಚ್  ಬೋಲ್ಟ್‌ಗೆ ಗೋಮಾಂಸ ಸೇವಿಸುವಂತೆ ಸಲಹೆ ಮಾಡಿದ್ದನ್ನು  ತಾವು ಉಲ್ಲೇಖಿಸಿದ್ದು, ಗೋಮಾಂಸ ಸೇವನೆಗೆ ಉತ್ತೇಜನ ನೀಡುವ ಉದ್ದೇಶವಲ್ಲ ಎಂದು  ಬಿಜೆಪಿ ಸಂಸದ ಉದಿತ್ ರಾಜ್ ಸ್ಪಷ್ಟಪಡಿಸಿದರು. ಪ್ರತಿಕೂಲ ಸಂದರ್ಭಗಳಲ್ಲಿ ಕೂಡ ಭಾರತದ ಅಥ್ಲೀಟ್‌ಗಳು ಮಿಂಚಬಹುದೆಂದು ಸ್ಫೂರ್ತಿ ತುಂಬುವುದು ತಮ್ಮ ಉದ್ದೇಶವಾಗಿತ್ತು ಎಂದು ಅವರು ಹೇಳಿದರು.
 
ತಮ್ಮ ಅಭಿಪ್ರಾಯವನ್ನು ತಪ್ಪಾಗಿ ಅರ್ಥೈಸಿಕೊಂಡ ಬಗ್ಗೆ ತಮಗೆ ದುಃಖವಿದೆ ಎಂದು ಸಂಸದರು ಹೇಳಿದರು. ತಾವು ಗೋಮಾಂಸ ಸೇವನೆಗೆ ಸಂಬಂಧಿಸಿ ಯಾವುದೇ ಕಾಮೆಂಟ್ ಮಾಡಿಲ್ಲ. ಆದರೆ ಉಸೇನ್ ಬೋಲ್ಟ್ ಹೇಳಿಕೆಯನ್ನು ಮಾತ್ರ ತಾವು ಉಲ್ಲೇಖಿಸಿದ್ದು, ಅದನ್ನು ಮಾಧ್ಯಮಗಳು ತಾವು ಗೋಮಾಂಸ ಸೇವನೆಗೆ ಸಲಹೆ ನೀಡಿದ್ದೇನೆಂದು ತಪ್ಪಾಗಿ ವ್ಯಾಖ್ಯಾನಿಸಿವೆ ಎಂದು ಉದಿತ್ ರಾಜ್ ಹೇಳಿಕೆಯಲ್ಲಿ ತಿಳಿಸಿದರು. 
 
ಕಳೆದ ಭಾನುವಾರ ಉದಿತ್ ರಾಜ್ ಟ್ವೀಟ್ ಮಾಡಿ, ಜಮೈಕಾದ ಉಸೇನ್ ಬೋಲ್ಟ್ ಬಡತನದಲ್ಲಿದ್ದಾಗ ತರಬೇತುದಾರ ಎರಡು ಹೊತ್ತು ಗೋಮಾಂಸ ತಿನ್ನುವಂತೆ ಸಲಹೆ ಮಾಡಿದರು. ಅದಾದ ಬಳಿಕ ಒಲಿಂಪಿಕ್ಸ್‌ನಲ್ಲಿ 9 ಚಿನ್ನದ ಪದಕಗಳನ್ನು ಬೋಲ್ಟ್ ಗೆದ್ದರು ಎಂದು ತಿಳಿಸಿದ್ದರು.
 
 ಉದಿತ್ ರಾಜ್ ಟ್ವೀಟ್ ವೈರಲ್ ಆಗಿ ವ್ಯಾಪಕ ಟೀಕೆಗಳು ವ್ಯಕ್ತವಾದ ಬಳಿಕ ಸಂಸದ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ತಾವು ಜಮೈಕಾದ ಸಂದರ್ಭಗಳನ್ನು ಉದಾಹರಿಸಿ, ಕಳಪೆ ಮೂಲಸೌಲಭ್ಯ ಮತ್ತು ಬಡತನದ ಮಧ್ಯೆಯೂ ಬೋಲ್ಟ್ 9 ಪದಕಗಳನ್ನು ಜಯಿಸಿದರು. ನಮ್ಮ ಆಟಗಾರರು ಕೂಡ ಒಲಂಪಿಕ್ಸ್‌ನಲ್ಲಿ ಗೆಲುವು ಗಳಿಸಲು ನಾನಾ ಮಾರ್ಗಗಳನ್ನು ಅರಸಬೇಕು ಎಂದು ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ