ಮೋದಿ ಎಫೆಕ್ಟ್ : ಐದು ವರ್ಷಗಳಲ್ಲಿ ಮೊದಲ ಬಾರಿಗೆ ಡೀಸೆಲ್‌ ದರದಲ್ಲಿ 3.64 ರೂ. ಇಳಿಕೆ

ಭಾನುವಾರ, 19 ಅಕ್ಟೋಬರ್ 2014 (12:15 IST)
ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಡೀಸೆಲ್ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಿದೆ. ಇದರ ಪರಿಣಾಮವಾಗಿ ಐದು ವರ್ಷಗಳಲ್ಲಿ ಇದೇ ಮೊದಲ ಸಲ ಡೀಸೆಲ್‌ ದರ ಇಳಿದಿದ್ದು, ಬೆಂಗಳೂರಿನಲ್ಲಿ ಲೀಟರ್‌ಗೆ ರೂ3.64 ಕಡಿಮೆಯಾಗಿದೆ. 
 
ಆದರೆ, ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಿರುವುದರಿಂದ ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ಡೀಸೆಲ್‌ ಬೆಲೆ ಕೂಡ ಹೆಚ್ಚು ಅಥವಾ ಕಡಿಮೆ ಆಗಲಿದೆ. ಅಲ್ಲದೇ ಇನ್ನು ಮುಂದೆ ಡೀಸೆಲ್‌ಗೆ ಸರ್ಕಾರದ ಸಬ್ಸಿಡಿ ನೆರವು ಇರುವುದಿಲ್ಲ.
 
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಸಂಜೆ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರಕ್ಕೆ ಒಪ್ಪಿಗೆ ನೀಡಲಾಯಿತು.
 
ಶನಿವಾರ ಮಧ್ಯರಾತ್ರಿಯಿಂದಲೇ ಹೊಸ ನೀತಿ ಮತ್ತು ದರ ಇಳಿಕೆ ಜಾರಿಗೊಂಡಿದೆ. ಹೀಗಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತಿದೆ.
 
ಇದಕ್ಕೆ ಮುನ್ನ 2009ರ ಜ. 29­ರಂದು ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ ರೂ 2 ಕಡಿಮೆಯಾಗಿತ್ತು. ಆಗ ಪ್ರತಿ ಲೀಟರ್‌ನ ಬೆಲೆ ರೂ 30.86 ಇತ್ತು. ಆರ್ಥಿಕ ಸುಧಾರಣಾ ಕ್ರಮವಾಗಿ ಡೀಸೆಲ್‌ ಬೆಲೆಯನ್ನು ನಿಯಂತ್ರಣ ಮುಕ್ತಗೊಳಿಸಬೇಕೆಂಬ ಒತ್ತಡ ಹಲವು ವರ್ಷಗಳಿಂದಲೇ ಸರ್ಕಾರದ ಮೇಲೆ ಇತ್ತು. ಹೀಗಾಗಿ, ಡೀಸೆಲ್‌ ಮೇಲಿನ ಸಬ್ಸಿಡಿ ಹೊರೆ ಇಳಿಸಿಕೊಳ್ಳಲು ನಿರ್ಧರಿಸಿದ್ದ ಹಿಂದಿನ ಯುಪಿಎ ಸರ್ಕಾರ ಅದರ ಬೆಲೆಯನ್ನು ಪ್ರತಿ ತಿಂಗಳು ಲೀಟರ್‌ಗೆ 50 ಪೈಸೆ ಹೆಚ್ಚಿಸಲು ಕ್ರಮ ಕೈಗೊಂಡಿತ್ತು. 2010ರ ಜನವರಿಯಿಂದ ಇದು ಜಾರಿಗೆ ಬಂದಿತ್ತು. ಅದಾದ ನಂತರ 19 ಬಾರಿ ಏರಿಕೆ ಕಂಡ ಡೀಸೆಲ್‌ ಬೆಲೆ ಒಟ್ಟು 11.81 ರೂಪಾಯಿ ಹೆಚ್ಚಾಗಿತ್ತು.

ವೆಬ್ದುನಿಯಾವನ್ನು ಓದಿ