ದಿಗ್ವಿಜಯ್ ಸುತ್ತ ಸಚಿವ ಸ್ಥಾನದ ಆಕಾಂಕ್ಷಿಗಳ ದಂಡು

ಮಂಗಳವಾರ, 26 ಆಗಸ್ಟ್ 2014 (14:03 IST)
ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಎರಡು ಸ್ಥಾನಗಳಲ್ಲಿ ಗೆದ್ದು ಸಂಭ್ರಮದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಸಂಪುಟ ಸಂಕಟ ಶುರುವಾಗಿದೆ.
 
ಈ ಸಂಬಂಧ ಇಂದು ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ನಡುವಿನ ಸಮನ್ವಯ ಸಮಿತಿ ಸಭೆ ಆರಂಭವಾಗಿದ್ದು, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸೇರಿದಂತೆ ನಿಗಮ ಮಂಡಳಿಗಳಿಗೆ ಶಾಸಕರನ್ನು, ಕಾರ್ಯಕರ್ತರನ್ನು ನೇಮಕ ಮಾಡುವ ಬಗ್ಗೆ ಮತ್ತು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಅಸಮಾಧಾನದ ಬಗ್ಗೆಯೂ ಚರ್ಚಿಸುವ ಸಾಧ್ಯತೆ ಇದೆ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಕೆ.ಜೆ.ಜಾರ್ಜ್ ಸಭೆಯಲ್ಲಿ ಭಾಗವಹಿಸಿದ್ದಾರೆ.
 
ಸಿಎಂ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆ ಸಾಕು, ಪುನರಚನೆ ಬೇಡ ಎನ್ನುತ್ತಿದ್ದಾರೆ. ಆದರೆ ಕೆಲವು ಸಚಿವರ ಮೇಲೆ ಮುನಿಸಿಕೊಂಡಿರುವ ಶಾಸಕರು, ಸಚಿವರಾದ ಬಾಬುರಾವ್ ಚಿಂಚನಸೂರು, ಅಂಬರೀಶ್, ಶಾಮನೂರು ಶಿವಶಂಕರಪ್ಪ ಹಾಗೂ ಕಿಮ್ಮನೆ ರತ್ನಾಕರ್ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
 
ಈ ಮಧ್ಯೆ, ಸಮನ್ವಯ ಸಮಿತಿ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿರುವ ಸಿಎಂ, ಸಭೆಯಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಯಾವುದೇ ಚರ್ಚೆ ಮಾಡುವುದಿಲ್ಲ ಮತ್ತು ಗಣೇಶ್ ಹಬ್ಬದ ನಂತರವೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
 
ಸಮನ್ವಯ ಸಭೆಗೂ ಮುನ್ನ ಶಾಸಕರಾದ ಶಿವಶಂಕರ ರೆಡ್ಡಿ, ಅಶೋಕ್ ಪಟ್ಟಣ್, ಮಾಲೀಕಯ್ಯ ಗುತ್ತೇದಾರ್ ಹಾಗೂ ರಾಜಶೇಖರ್ ಪಾಟೀಲ್ ಸೇರಿದಂತೆ ಹಲವು ಸಚಿವ ಆಕಾಂಕ್ಷಿಗಳು ಕುಮಾರಕೃಪಾ ಅತಿಥಿ ಗೃಹದಲ್ಲಿ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ತಮಗೂ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ.
 
ಇನ್ನು ಕುಮಾರ ಕೃಪಾ ಬಳಿ ಜಮಾಯಿಸಿದ್ದ ಹುಮ್ನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಅವರ ಬೆಂಬಲಗರು ತಮ್ಮ ನಾಯಕನಿಗೆ ಸಚಿವ ಸ್ಥಾನ ನೀಡುವಂತೆ ದಿಗ್ವಿಜಯ್ ಸಿಂಗ್ ಅವರನ್ನು ಒತ್ತಾಯಿಸಿದರು. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ರಾಜಶೇಖರ್ ಪಾಟೀಲ್ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಬೀದರ್ ಜಿಲ್ಲೆಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ವೇಳೆ ನಮ್ಮನ್ನು ಪರಿಗಣಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ