ಸಚಿವೆ ಸ್ಮೃತಿ ಇರಾನಿ ಬಿಜೆಪಿ ಸೇರ್ಪಡೆಗೂ ಮುನ್ನ ಕಾಂಗ್ರೆಸ್ ಸೇರಲು ಬಯಸಿದ್ದರು; ದಿಗ್ವಿಜಯ್ ಸಿಂಗ್

ಭಾನುವಾರ, 28 ಫೆಬ್ರವರಿ 2016 (15:50 IST)
ಬಿಜೆಪಿ ಸೇರ್ಪಡೆಯಾಗುವ ಮುನ್ನ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೀಡುವಂತೆ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಮನವಿ ಸಲ್ಲಿಸಿದ್ದರು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೊಸ ಬಾಂಬ್ ಸಿಡಿಸಿದ್ದಾರೆ.
 
ಸಚಿವೆ ಸ್ಮೃತಿ ಇರಾನಿ ಅನೇಕ ಎಐಸಿಸಿ ಕಾಂಗ್ರೆಸ್ ನಾಯಕರೊಂದಿಗೆ ಸಂಪರ್ಕದಲ್ಲಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಚರ್ಚೆ ನಡೆಸಿದ್ದರು ಎಂದು ತಿಳಿಸಿದ್ದಾರೆ.
 
ಗುಜರಾತ್ ಗಲಭೆಯ ನಂತರ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರ ರಾಜೀನಾಮೆಗೆ ಒತ್ತಾಯಿಸಿದ್ದ ಸ್ಮೃತಿ ಇರಾನಿ, ಪ್ರಧಾನಿ ನರೇಂದ್ರ ಮೋದಿಯ ಭಕ್ತಳಾಗಿ ತನಗೆ ಬೇಕಾಗಿರುವುದನ್ನು ಪಡೆಯುವಂತಹ ಆಕರ್ಷಣೆಯ ಬಿಂದುವಾಗಿದ್ದಾಳೆ ಎಂದು ಲೇವಡಿ ಮಾಡಿದ್ದಾರೆ. 
 
ಉದ್ಯೋಗಿಗಳ ನೇಮಕಾತಿ ಅವ್ಯವಹಾರ ಪ್ರಕರಣದಲ್ಲಿ ಸ್ಥಳೀಯ ಕೋರ್ಟ್ ವಾರೆಂಟ್ ಜಾರಿಗೊಳಿಸಿದ್ದರಿಂದ, ದಿಗ್ವಿಜಯ್ ಸಿಂಗ್ ಇಂದು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದಿದ್ದಾರೆ.
 
ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ,ಕಳೆದ 2002ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಜನ್ಮದಿನದಂದು ಮೋದಿ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ್ದರು.

ಇದೀಗ ಅವರು ಕಾಂಗ್ರೆಸ್ ನಾಯಕರಿಗೆ ಧರ್ಮ ಮತ್ತು ದೇಶಭಕ್ತಿಯ ಬಗ್ಗೆ ಪಾಠ ಕಲಿಸುತ್ತಿದ್ದಾರೆ. ಸಚಿವೆ ಇರಾನಿ ಎಚ್‌ಆರ್‌ಡಿ ಖಾತೆ ಸಚಿವರಾಗಿದ್ದಾರೆಯೋ ಅಥವಾ ಯಾವುದೇ ಧರ್ಮದ ಸಚಿವರಾಗಿದ್ದಾರೆಯೋ ಎನ್ನುವ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಸವಾಲ್ ಹಾಕಿದ್ದಾರೆ. 

ವೆಬ್ದುನಿಯಾವನ್ನು ಓದಿ