ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ಕೊಳಕು ಯುದ್ಧವನ್ನು ಎದುರಿಸುತ್ತಿದೆ:ಜನರಲ್ ಬಿಪಿನ್ ರಾವತ್

ಭಾನುವಾರ, 28 ಮೇ 2017 (18:28 IST)
ನವದೆಹಲಿ:ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ಅತ್ಯಂತ ಕೊಳಕು ಯುದ್ಧವನ್ನು ಎದುರಿಸುತ್ತಿದೆ. ಈ ಕೊಳಕು ಯುದ್ಧವನ್ನು ಆವಿಷ್ಕಾರಿ ರೀತಿಯಲ್ಲೇ ಎದುರಿಸಬೇಕಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ.
 
ಸೇನಾಪಡೆ ಕಾಶ್ಮೀರದಲ್ಲಿ ಛಾಯಾ ಸಮರವನ್ನು ಎದುರಿಸುತ್ತಿದ್ದು, ಛಾಯಾ ಸಮರ ಎಂಬುದು ಅತ್ಯಂತ ಕೊಳಕು ಯುದ್ಧ. ಅದನ್ನು ಅತ್ಯಂತ ಕೊಳಕಾಗಿಯೇ ನಡೆಸಲಾಗುತ್ತದೆ. ಅಲ್ಲಿ ಎದುರಾಳಿ ಮುಖಾಮುಖಿಯಾದಾಗ ಸಮಯಕ್ಕೆ ತಕ್ಕಂತೆ ಹೋರಾಡಬೇಕೆಂಬುದೇ ನಿಯಮ.  ಇಂತಹ ಕೊಳಕು ಯುದ್ಧವನ್ನು ಎದುರಿಸಲು ಆವಿಷ್ಕಾರಿ(ಇನ್ನೋವೇಟಿವ್) ಕ್ರಮಗಳನ್ನೇ ಅನುಸರಿಸಬೇಕಾಗುತ್ತದೆ ಎಂದು ಹೇಳುವ ಮೂಲಕ ಕಲ್ಲುತೂರಾಟ ನಡೆಸಿದ ಉಗ್ರನನ್ನು ಸೇನಾ ಜೀಪ್ ಗೆ ಕಟ್ಟಿ ಮಾನವ ಗುರಾಣಿಯಂತೆ ಬಳಸಿಕೊಂಡು ಹಲವು ಯೋಧರ ಪ್ರಾಣ ಉಳಿಸಿದ ಯುವ ಸೇನಾಧಿಕಾರಿ ಲಿತುಲ್ ಗೊಗೋಯ್ ಕ್ರಮವನ್ನು ಜನರಲ್ ರಾವತ್ ಸಮರ್ಥಿಸಿಕೊಂಡಿದ್ದಾರೆ.
 
ಜನರು ನಮ್ಮತ್ತ ಕಲ್ಲೆಸೆಯುತ್ತಾರೆ. ಪೆಟ್ರೋಲ್ ಬಾಂಬ್ ಗಳನ್ನು ಎಸೆಯುತ್ತಾರೆ. ಅಂತಹ ಸಂದರ್ಭಗಳಲ್ಲಿ ನನ್ನ ಯೋಧರು ಏನು ಮಾಡಬೇಕೆಂದು ನನ್ನ ಅನುಮತಿ ಪಡೆದೇ ಪರಿಸ್ಥಿತಿಯನ್ನು ಎದುರಿಸಬೇಕಿಲ್ಲ.  ಅಥವಾ ನೀವು ಸುಮ್ಮನ್ನಿದ್ದು ಪ್ರಾಣ ಕಳೆದುಕೊಳ್ಳಿ ಅಂತ ನಾನು ಹೇಳಬೇಕಿತ್ತೆ? ಸೇನಾ ಮುಖ್ಯಸ್ಥನಾಗಿ ನಾನು ಇಂಥಹ ಮಾತನ್ನು ಆಡಲಾಗದು. ಅಲ್ಲಿ ಕಾದಾಡುತ್ತಿರುವ ನನ್ನ ಯೋಧರ ನೈತಿಕ ಸ್ಥೈರ್ಯ ಕಾಪಾಡುವುದು ನನ್ನ ಕರ್ತವ್ಯ ಎಂದು ರಾವತ್ ಹೇಳಿದ್ದಾರೆ.
 
ಇದೇ ವೇಳೆ ಸೇನಾ ಮುಖ್ಯಸ್ಥನಾಗಿ ನನ್ನ ಕಾಳಜಿ ಇಷ್ಟೇ. ನಾನು ಯುದ್ಧಭೂಮಿಯಿಂದ ಬಹಳ ದೂರದಲ್ಲಿದ್ದೇನೆ. ನಾನು ನಿಮ್ಮೊಂದಿಗಿದ್ದೇನೆ ಎಂದು ಮಾತ್ರ ನನ್ನ ಯೋಧರಿಗೆ ಹೇಳಬಲ್ಲೆ. ತಪ್ಪುಗಳಾಗಬಹುದು. ಆದರೆ ನಿಮ್ಮಿಂದ ಉದ್ದೇಶಪೂರ್ವಕ ತಪ್ಪುಗಳಾಗಿಲ್ಲ ಎಂದಾದರೆ ನಿಮ್ಮ ಬೆಂಬಲಕ್ಕೆ ನಾನಿರುತ್ತೇನೆ ಎಂದು ರಾವತ್ ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ