ಕೋಮುಗಲಭೆಯಾದಲ್ಲಿ ಡಿಸಿ, ಎಸ್ಪಿ ನೇರ ಹೊಣೆ: ಅಖಿಲೇಶ್ ಯಾದವ್

ಶನಿವಾರ, 19 ಸೆಪ್ಟಂಬರ್ 2015 (19:21 IST)
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೋಮುಗಲಭೆಗಳು ಸಂಭವಿಸಿದಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇರ ಹೊಣೆ ಮಾಡುವುದಾಗಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಎಚ್ಚರಿಸಿದ್ದಾರೆ.
 
ಕಾನೂನು ಸುವ್ಯವಸ್ಥೆಗೆ ಸರಕಾರ ಮೊದಲ ಆದ್ಯತೆ ನೀಡುತ್ತಿದ್ದು, ಇದರಲ್ಲಿ ಯಾವುದೇ ರೀತಿಯ ಹೊಂದಾಣಿಕೆ ಸಾಧ್ಯವಿಲ್ಲ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. 
 
ಪ್ರಾಮಾಣಿಕ ಮತ್ತು ಕರ್ತವ್ಯನಿಷ್ಠ ಅಧಿಕಾರಿಗಳಿಂದ ಸರಕಾರದ ಇಮೇಜ್ ಹೆಚ್ಚುತ್ತದೆ. ಆದ್ದರಿಂದ, ಕಾನೂನು ಸುವ್ಯವಸ್ಥೆ ಸರಿಯಾಗಿಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೇ ರಾಜಕಾರಣಿಯ ಒತ್ತಡಕ್ಕೆ ಮಣಿಯಬೇಡಿ ಎಂದು ಕಿವಿಮಾತು ಹೇಳಿದರು.   
 
ಆರೋಗ್ಯ, ವಿದ್ಯುತ್, ರಸ್ತೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳು ನೇರವಾಗಿ ಜನರೊಂದಿಗೆ ಸಂಪರ್ಕವಿರುವುದರಿಂದ ಆದಷ್ಟು ಬೇಗ ವ್ಯವಸ್ಥೆ ಸರಿಪಡಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆದೇಶಿಸಿದರು.
 
ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ಮನೋಭಾವನೆ ತಳೆದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಎಚ್ಚರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ