ಶಸ್ತ್ರಚಿಕಿತ್ಸೆ ಬಳಿಕ ಶೋಭಾ ಡೇ ಗೆ ಧನ್ಯವಾದ ಹೇಳುತ್ತಾರಾ ಜೋಗಾವತ್?
ಶುಕ್ರವಾರ, 3 ಮಾರ್ಚ್ 2017 (13:33 IST)
ಶೋಭಾ ಡೇ ಅವರಿಂದ ಅಪಹಾಸ್ಯಕ್ಕೀಡಾಗಿದ್ದ ಮಧ್ಯಪ್ರದೇಶದ ಪೊಲೀಸ್ ಇನ್ಸ್ ಪೆಕ್ಟರ್ ದೌಲತ್ ರಾಮ್ ಜೋಗಾವತ್ ಅವರಿಗೆ ಮುಂಬೈನ ಆಸ್ಪತ್ರೆಯೊಂದು ನೆರವಿನ ಹಸ್ತ ನೀಡಿದ್ದು ನಿಮಗೆ ಗೊತ್ತಿರಲಿಕ್ಕೆ ಸಾಕು. ಸದ್ಯ ಮುಂಬೈನ ಸೈಫೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಸದ್ಯದಲ್ಲೇ ತಮ್ಮ ದಢೂತಿ ದೇಹದಿಂದ ಮುಕ್ತಿ ಪಡೆಯುವ ಲಕ್ಷಣಗಳು ಕಾಣಿಸುತ್ತಿವೆ.
ಹೌದು, ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಸದ್ಯದಲ್ಲೇ ಜೋಗಾವತ್ ಸದ್ಯದಲ್ಲೇ ತಮ್ಮ ಹೊಸ ರೂಪದ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಆನಂದಿಸುತ್ತಾರೆ. ತಮ್ಮನ್ನು ನೋಡಿ ನಕ್ಕವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎನ್ನುತ್ತಾರೆ.
ಇಂದು ಮುಂಜಾನೆ ಅವರ ಜತೆ ಮಾತನಾಡುತ್ತಾ ನಾನು ತಮಾಷೆ ಮಾಡಿದ್ದೆ. ಶಸ್ತ್ರಚಿಕಿತ್ಸೆ ಬಳಿಕ ನಿಮ್ಮ ಫೋಟೋವನ್ನು ಟ್ವೀಟ್ ಮಾಡಿ ಶೋಭಾ ಡೇ ಅವರಿಗೆ ಧನ್ಯವಾದ ತಿಳಿಸಿ. ಅವರಿಂದಾಗಿಯೇ ನಿಮಗೆ ಚಿಕಿತ್ಸೆ ದೊರೆಯುವಂತಾಯಿತು, ಎನ್ನುತ್ತಾರೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾಕ್ಟರ್ ಮುಪ್ಫ್‌ಜಲ್ ಲಕ್ಡಾವಾಲಾ .
ಜೋಗಾವತ್ ಅವರಿಗೆ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡದ ಸಮಸ್ಯೆ ಕೂಡ ಇದೆ. ಶಸ್ತ್ರಚಿಕಿತ್ಸೆ ಬಳಿಕ ಅವರ ತೂಕ 100ರಿಂದ 80 ಕೆಜಿ ತಗ್ಗುವ ವಿಶ್ವಾಸ ನಮಗಿದೆ. ಪರೀಕ್ಷೆ ನಡೆಯುತ್ತಿದೆ. ಅವರು ಒಪ್ಪಿದರೆ ನಾಲ್ಕೈದಪ ದಿನಗಳಲ್ಲಿ ಅವರ ಆಪರೇಶನ್ ನಡೆಯಲಿದೆ ಎಂದು ಲಕ್ಡೇವಾಲಾ ಹೇಳಿದ್ದಾರೆ.
ಕಳೆದ ತಿಂಗಳು ಬಿಎಂಸಿ ಚುನಾವಣೆ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ದೌಲತ್ ರಾಮ್ ಅವರ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಾಕಿದ್ದ ಶೋಭಾ ಡೇ, ಪೊಲೀಸರ ಬಗ್ಗೆ ವ್ಯಂಗ್ಯವಾಡಿದ್ದರು. ದಪ್ಪಗಿದ್ದಾರೆ ಎಂದು ಹೀಯಾಳಿಸಿದ್ದರು.
ಶೋಭಾ ಡೇ ಟ್ವೀಟ್ ನಿಂದ ನೊಂದಿದ್ದ ದೌಲತ್ ರಾಮ್, ಹಾರ್ಮೋನ್ ಸಮಸ್ಯೆಯಿಂದಾಗಿ ದೇಹದ ತೂಕ ಹೆಚ್ಚಿದೆ ಅಂತಾ ಅಳಲು ತೋಡಿಕೊಂಡಿದ್ರು. ದೌಲತ್ ರಾಮ್ ಸುಮಾರು 180 ಕೆಜಿ ತೂಕವಿದ್ದು, ಸೈಫಿ ಆಸ್ಪತ್ರೆಯಲ್ಲಿ ಬ್ಯಾರಿಯಾಟ್ರಿಕ್ ಸರ್ಜರಿ ಮೂಲಕ ಅವರ ದೇಹದ ಬೊಜ್ಜನ್ನು ತೆಗೆದುಹಾಕಲಾಗುತ್ತದೆ.