ಕೌಟುಂಬಿಕ ದೌರ್ಜನ್ಯ ಪ್ರಕರಣ: ಭಾರ್ತಿಯನ್ನು ಆಗ್ರಾಕ್ಕೆ ಕರೆದೊಯ್ದ ತನಿಖಾಧಿಕಾರಿಗಳು

ಶನಿವಾರ, 3 ಅಕ್ಟೋಬರ್ 2015 (13:40 IST)
ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಎದುರಿಸುತ್ತಿರುವ ಆಪ್ ಶಾಸಕ, ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರನ್ನು ತನಿಖಾಧಿಕಾರಿಗಳು ಶುಕ್ರವಾರ ಆಗ್ರಾಕ್ಕೆ ಕರೆದೊಯ್ದಿದ್ದಾರೆ.

ಸುಪ್ರೀಂಕೋರ್ಟ್ ಭಾರ್ತಿ ಅವರಿಗೆ ಮಧ್ಯಂತರ ಜಾಮೀನನ್ನು ನೀಡಲು ನಿರಾಕರಿಸಿದ್ದು, ಪೊಲೀಸ್ ಕಸ್ಟಡಿಯನ್ನು ಮೂರು ದಿನಗಳ ಕಾಲ ಮುಂದುವರೆಸಲಾಗಿದೆ. 
 
ಬಂಧನದಿಂದ ತಪ್ಪಿಸಿಕೊಳ್ಳಲು ಭಾರ್ತಿ ಆಗ್ರಾ, ಮಥುರಾ ಸೇರಿದಂತೆ ಹಲವು ಪ್ರದೇಶಗಳಿಗೆ ಪಲಾಯನ ಮಾಡಿದ್ದರು. ಆ ಪ್ರದೇಶಗಳಿಗೆಲ್ಲಾ ಭಾರ್ತಿಯವರನ್ನು ಜತೆಗೆ ಕರೆದುಕೊಂಡು ಪೊಲೀಸರು ಭೇಟಿ ನೀಡುತ್ತಿದ್ದಾರೆ. 
 
ಶನಿವಾರ ಅವರನ್ನು ಮಥುರಾಕ್ಕೆ ಕರೆದೊಯ್ಯಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಪ್ರದೇಶಗಳಲೆಲ್ಲಾ ಭಾರ್ತಿಗೆ ಆಶ್ರಯ ನೀಡಿದವರನ್ನೆಲ್ಲಾ ಪೊಲೀಸರು ವಿಚಾರಣೆಗೊಳಪಡಿಸಲಿದ್ದಾರೆ.
 
ಸೋಮನಾಥ್ ಭಾರ್ತಿ ಕಳೆದ ಮಂಗಳವಾರ ಪೊಲೀಸರ ಮುಂದೆ ಶರಣಾಗಿದ್ದರು. ಭಾರ್ತಿ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಶರಣಾಗುವಂತೆ ಸೂಚನೆ ನೀಡಿತ್ತು. ಸೋಮನಾಥ್ ಭಾರ್ತಿ ಅವರ ವಿರುದ್ಧ ಪತ್ನಿ ಲಿಪಿಕಾ ಅವರು ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ