ಮೋದಿಯ ಸ್ವಚ್ಚ ಭಾರತ್ ಅಭಿಯಾನ್ ಲೇವಡಿ ಮಾಡಿದ ಬಿಜೆಪಿ ಸಚಿವ

ಸೋಮವಾರ, 12 ಅಕ್ಟೋಬರ್ 2015 (17:15 IST)
ಪ್ರಧಾನಿ ಮೋದಿಯವರ ಸ್ವಚ್ಚ ಭಾರತ್ ಅಭಿಯಾನವನ್ನು ಹರಿಯಾಣಾದ ಬಿಜೆಪಿ ಸಚಿವ ಕೃಷ್ಣ ಕುಮಾರ್ ಬೇಡಿ ಲೇವಡಿ ಮಾಡಿರುವ ಹೇಳಿಕೆ ವಿಡಿಯೋ ವೈರಲ್ ಆಗಿದ್ದು, ಬಿಜೆಪಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.  
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಸ್ವಚ್ಚ ಭಾರತ್ ಅಭಿಯಾನ್, ಬಿಜೆಪಿ ನಾಯಕರಿಗೇ ಭಾರವಾಗಿದೆ. ಬಿಜೆಪಿ ನಾಯಕರ ನಿರಾಸಕ್ತಿಯಿಂದಾಗಿ ವಿಪಕ್ಷಗಳಿಗೆ ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಹೊಸ ಅಸ್ತ್ರ ನೀಡಿದಂತಾಗಿದೆ.
 
ಹರಿಯಾಣಾದ ಬಿಜೆಪಿ ನೇತೃತ್ವದ ಸರಕಾರದ ಸಾಮಾಜಿಕ ನ್ಯಾಯ ಮತ್ತು ಉದ್ಯೋಗ ಖಾತೆ ಸಚಿವರಾದ ಬೇಡಿ, ಪೊರಕೆಯಿಂದ ಕಸಗುಡಿಸುತ್ತಾ ಮೋದಿಯಿಂದಾಗಿ ನಾವೆಲ್ಲಾ ಏನೇನು ಮಾಡಬೇಕಾಗುತ್ತದೆಯೇ ಗೊತ್ತಿಲ್ಲ ಎಂದು ನೀಡಿರುವ ಹೇಳಿಕೆ ಬಹಿರಂಗವಾಗಿದೆ.
 
ಫತೇಹಬಾದ್‌ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಸಚಿವ ಬೇಡಿ, ಪೊರಕೆ ಹಿಡಿದು ಪಂಚಾಯತ್ ಭವನ್ ಸ್ವಚ್ಚಗೊಳಿಸುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. 
 
ಸಚಿವರ ಹೇಳಿಕೆಯಿಂದ ಸ್ಥಳದಲ್ಲಿಯೇ ಉಪಸ್ಥಿತರಿದ್ದ ಹಿರಿಯ ಅಧಿಕಾರಿಗಳು ಕೂಡಾ ನಗೆಗಡಲಲ್ಲಿ ತೇಲಿದರು. ಆದರೆ, ಸ್ಥಳದಲ್ಲಿ ಉಪಸ್ಥಿತರಿದ್ದ ಮಾಧ್ಯಮಗಳ ಪ್ರತಿನಿಧಿಗಳತ್ತ ಸಂಶಯದಿಂದ ನೋಡಿ ನೀವು ರಿಕಾರ್ಡ್ ಮಾಡಿಕೊಂಡಿಲ್ಲ ಎಂದು ಭಾವಿಸುತ್ತೇನೆ. ದಯವಿಟ್ಟು ನನ್ನನ್ನು ಇಕ್ಕಟ್ಟಿನಲ್ಲಿ ಸಿಲುಕಿಸಬೇಡಿ ಎಂದಿರುವ ಹೇಳಿಕೆ ಕೂಡಾ ಖಾಸಗಿ ಟೆಲಿವಿಜನ್ ಚಾನೆಲ್‌ಗಳು ಬಿತ್ತರಿಸುತ್ತಿವೆ.
 
ಸಚಿವ ಕೃಷ್ಣ ಕುಮಾರ್ ಬೇಡಿ ಹೇಳಿಕೆ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ವೈರಲ್ ಆಗಿದೆ ಎಂದು ಮೂಲಗಳು ತಿಳಿಸಿವೆ. 
 
ನಂತರ ತಮ್ಮ ತಪ್ಪು ಮುಚ್ಚಿಕೊಳ್ಳಲು ಯತ್ನಿಸಿದ ಸಚಿವ ಬೇಡಿ, ನಾವು ಸ್ವಚ್ಚ ಭಾರತ ಅಭಿಯಾನಕ್ಕೆ ಬದ್ಧರಾಗಿದ್ದೇವೆ. ಸಂಪೂರ್ಣ ಹರಿಯಾಣಾ ಸ್ವಚ್ಚವಾಗಿರಬೇಕು ಎಂದು ಬಯಸುವುದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ