ಆರೆಸ್ಸೆಸ್, ಬಿಜೆಪಿಯಿಂದ ದೇಶ ಭಕ್ತಿ ಕಲಿಯಬೇಕಾಗಿಲ್ಲ: ರಾಹುಲ್ ಗಾಂಧಿ

ಶುಕ್ರವಾರ, 19 ಫೆಬ್ರವರಿ 2016 (16:49 IST)
ಜೆಎನ್‌ಯು ಪ್ರಕರಣದಲ್ಲಿ ದೇಶದ್ರೋಹಿಗಳನ್ನು ಬೆಂಬಲಿಸುತ್ತಿದ್ದಾರೆ ಎನ್ನುವ ಆರೋಪ ಹೊತ್ತಿರುವ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ, ಆರೆಸ್ಸೆಸ್ ಮತ್ತು ಬಿಜೆಪಿಯಿಂದ ದೇಶಭಕ್ತಿಯ ಪಾಠ ಕಲಿಯಬೇಕಾದ ಅನಿವಾರ್ಯತೆ ನನಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.  
 
ರಾಷ್ಟ್ರಭಕ್ತಿ ನನ್ನ ರಕ್ತದಲ್ಲಿರುವುದರಿಂದ ಕೋಮುವಾದ ಬಿತ್ತುತ್ತಿರುವ ಆರೆಸ್ಸೆಸ್ ಮತ್ತು ಬಿಜೆಪಿ ಪಕ್ಷದಿಂದ ಪಾಠ ಕಲಿಯಬೇಕಾಗಿಲ್ಲ ಎಂದು ಗುಡುಗಿದ್ದಾರೆ.
 
ಆರೆಸ್ಸೆಸ್ ಮತ್ತು ಬಿಜೆಪಿ ವಿರುದ್ಧದ ಧ್ವನಿಯನ್ನು ಅಡಗಿಸುವಂತಹ ಕೃತ್ಯಗಳು ದೇಶಾದ್ಯಂತ ನಡೆಯುತ್ತಿರುವುದು ಬಹಿರಂಗವಾಗಿದೆ ಎಂದು ಆರೋಪಿಸಿದ್ದಾರೆ.
 
ಅಮೇಥಿ ಲೋಕಸಭೆ ಕ್ಷೇತ್ರದ ಸಾಲೋನ್ ಗ್ರಾಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ದ್ವಿದಳ ಧಾನ್ಯಗಳ ದರಗಳು ಮೊದಲ ಬಾರಿಗೆ ಗಗನಕ್ಕೇರಿವೆ. ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಪ್ರಧಾನಿ ಮೋದಿ ಪ್ರತಿಯೊಬ್ಬ ರೈತನಿಗೆ 15 ಲಕ್ಷ ರೂಪಾಯಿಗಳನ್ನು ನೀಡಬೇಕು. ಇಲ್ಲವಾದಲ್ಲಿ ಪ್ರಧಾನಿ ಹುದ್ದೆಯಿಂದ ತೊಲಗಬೇಕು ಎಂದು ಖಾರವಾಗಿ ನುಡಿದರು.
 
ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಮುಂಬರುವ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ