ನಮ್ಮ ಭಾವನೆಗಳ ಜತೆ ಚೆಲ್ಲಾಟವಾಡಬೇಡಿ: ನಿರ್ಭಯಾ ಪಾಲಕರ ರೋಧನೆ

ಶುಕ್ರವಾರ, 22 ಆಗಸ್ಟ್ 2014 (18:32 IST)
ದೆಹಲಿ ನಿರ್ಭಯಾ ಸಾಮೂಹಿಕ ಅತ್ಯಾಚಾರದ ಘಟನೆ ಜಾಗತಿಕ ಪ್ರವಾಸೋದ್ಯಮದಲ್ಲಿ ಭಾರತಕ್ಕೆ ಶತಕೋಟಿಯಷ್ಟು ನಷ್ಟವಾಗುವಂತೆ ಮಾಡಿತು ಎಂದಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಹೇಳಿಕೆಗೆ ನಿರ್ಭಯಾ ಪಾಲಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. 

ನಾವು ಯಾವ ಮಟ್ಟದ  ಸಂಕಷ್ಟವನ್ನು ಎದುರಿಸಿದ್ದೇವೆ ಎನ್ನುವ ಅರಿವಿಲ್ಲದ ರಾಜಕಾರಣಿಗಳು ಈ ರೀತಿಯ ಆಧಾರ ರಹಿತ  ಹೇಳಿಕೆಗಳನ್ನು ನೀಡುತ್ತಾರೆ. ಜೇಟ್ಲಿಯವರ ಈ ಹೇಳಿಕೆಯಿಂದ ತೀವೃ ನೋವಾಗಿದೆ. ಮಹಿಳೆಯರಿಗೆ ರಕ್ಷಣೆಯನ್ನು ನೀಡುತ್ತೇವೆ ಎಂಬ  ವಾಗ್ದಾನವನ್ನು ನೀಡಿ  ಬಿಜೆಪಿ ಅಧಿಕಾರಕ್ಕೆ ಬಂದಿದೆ. ತಮ್ಮ ಮಾತಿಗೆ ತಕ್ಕಂತೆ ನಡೆಯಲು ಸಾಧ್ಯವಾಗದಿದ್ದರೆ, ಕೂಡಲೇ ರಾಜೀನಾಮೆಯನ್ನು ನೀಡಲಿ ಎಂದು ನಿರ್ಭಯಾ ತಂದೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 
 
ಈ ಹೇಳಿಕೆಯನ್ನು ಅವಮಾನಕರ ಎಂದಿರುವ ಅವರು ಸಚಿವರು ಕ್ಷಮೆಯಾಚಿಸಲೇಬೇಕು ಎಂದು ಹೇಳಿದ್ದಾರೆ. 
 
ಬಲಿಪಶು ಯುವತಿಯ ತಾಯಿ ಕೂಡ ಬಿಜೆಪಿ ನಾಯಕನಿಗೆ ಛೀಮಾರಿ ಹಾಕಿದ್ದಾರೆ. ಹಣಕಾಸು ಮಂತ್ರಿಯ ಜವಾಬ್ದಾರಿ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸುವುದು, ಅದನ್ನು ಬಿಟ್ಟು ಈ ರೀತಿಯ ಹೇಳಿಕೆಗಳನ್ನು ನೀಡುವುದಲ್ಲ ಎಂದಿರುವ ಅವರು ನಮ್ಮ ಭಾವನೆಗಳ ಜತೆ ಚೆಲ್ಲಾಟವಾಡಬೇಡಿ ಎಂದು ದೇಶದ ರಾಜಕಾರಣಿಗಳಲ್ಲಿ ಮನವಿ ಮಾಡಿದ್ದಾರೆ. 
 
ಅತ್ಯಾಚಾರದಂತಹ ಒಂದು ಸಣ್ಣ ಘಟನೆ, ಅಂತರಾಷ್ಟ್ರೀಯ ಮಟ್ಟದ ಸುದ್ದಿಯಾಗಿ ಮಾರ್ಪಟ್ಟು ನಾವು ಜಾಗತಿಕ ಪ್ರವಾಸೋದ್ಯಮದಲ್ಲಿ ಶತಕೋಟಿಯಷ್ಟು ನಷ್ಟವನ್ನು ಅನುಭವಿಸುವಂತೆ ಮಾಡಿತು ಎಂದು ಜೇಟ್ಲಿ  ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. 

ವೆಬ್ದುನಿಯಾವನ್ನು ಓದಿ