ಜನರನ್ನು ಲಘುವಾಗಿ ಪರಿಗಣಿಸದಿರಿ: ಬಿಜೆಪಿಗೆ ಶಿವಸೇನೆ ಎಚ್ಚರಿಕೆ

ಶನಿವಾರ, 1 ನವೆಂಬರ್ 2014 (17:40 IST)
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ದೇವೇಂದ್ರ ಫಡ್ನವಿಸ್ ಅವರಿಗೆ ರಾಜ್ಯದ ಜನತೆಯನ್ನು ಲಘುವಾಗಿ ಪರಿಗಣಿಸಿದಿರಿ ಎಂದು ಎಚ್ಚರಿಕೆ ನೀಡಿರುವ ಶಿವಸೇನೆ, ಸಾಮಾನ್ಯ ಜನರ ನಿರೀಕ್ಷೆಗಳನ್ನು ಹುಸಿಗೊಳಿಸದಿರಿ ಎಂದು ತಾಕೀತು ಮಾಡಿದೆ.

"ಹೊಸ ಸರ್ಕಾರ ಎಂದರೆ ಮದುವೆಯಾಗಿ ಅತ್ತೆ ಮನೆಗೆ ಬಂದ ಮದುಮಗಳಂತೆ. ಇಲ್ಲಿ ರಾಜ್ಯದ ಜನತೆ ಅತ್ತೆಯ ಸ್ಥಾನದಲ್ಲಿದ್ದರೆ,ಮುಖ್ಯಮಂತ್ರಿ ಫಡ್ನವೀಸ್‌ ಅವರು ಹೊಸ ಸೊಸೆಯಿದ್ದಂತೆ. ನೀವು  ಜನರನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಸರಕಾರ ತಪ್ಪು ಮಾಡಿದಾಗ ಕಿವಿ ಹಿಂಡಿ ಬುದ್ಧಿ ಹೇಳುವ ಅಧಿಕಾರ ಜನರಿಗಿದೆ" ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ  ಸಂಪಾದಕೀಯದಲ್ಲಿ ಸೇನೆ ಹೊಸ ಸಿಎಂ ಗೆ ಪಾಠ ಮಾಡಿದೆ.
 
ಇದು ಹೊಸ ಸರಕಾರ  ಕಲಿಯಬೇಕಾದ ಮೊದಲ ಪಾಠ ಎಂದಿರುವ ಸೇನೆ, ರಾಜ್ಯದಲ್ಲಿ ನಡೆದ ಚುನಾವಣೆಯ ಕೆಲ ವಾರಗಳ ಮುನ್ನ, (ಸಪ್ಟೆಂಬರ್ 25 ರಂದು)  ಮೈತ್ರಿ ಕಡಿದುಕೊಂಡು ಬೇರೆಯಾಗಿದ್ದ  ದೀರ್ಘ ಕಾಲದ ಮಿತ್ರ ಪಕ್ಷದ ಜತೆ ಮತ್ತೆ ಒಂದಾಗುವ ಸೂಚನೆಯನ್ನು ನೀಡುತ್ತಿದೆ.
 
ಚುನಾವಣಾ ಪೂರ್ವದಲ್ಲಿ ಜನತೆಗೆ ಮಾಡಿದ್ದ ವಾಗ್ದಾನಗಳನ್ನು ತತ್‌ಕ್ಷಣ ನನಸು ಮಾಡುವಂತಹ ಯಾವುದೇ ಮಂತ್ರದಂಡ ಸರ್ಕಾರದ ಬಳಿ ಇಲ್ಲ ಎಂಬುದು ಸತ್ಯ. ಆದರೆ ಪ್ರಥಮ ಬಾರಿ ಮಹಾರಾಷ್ಟ್ರದ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರದ ಮೇಲೆ ಜನತೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ. 
 
ಕಾಂಗ್ರೆಸ್-ಎನ್‌ಸಿಪಿ ಆಡಳಿತದ ಅವಧಿಯಲ್ಲಿ ಜನರ ಆಕಾಂಕ್ಷೆಗಳು ಸುಟ್ಟು ಬೂದಿಯಾದವು. ಬೂದಿಯಿಂದ ಎದ್ದು ಬರುವ ಫೀನಿಕ್ಸ್‌ನಂತೆ ಮುಖ್ಯಮಂತ್ರಿಯವರ ಕೆಲಸ  ಜನರಲ್ಲಿ ಭರವಸೆಯನ್ನು ಹುಟ್ಟಿಸಬೇಕು ಎಂದು ಸೇನೆ ಸಲಹೆ ನೀಡಿದೆ. 

ವೆಬ್ದುನಿಯಾವನ್ನು ಓದಿ