ರೈತರ ಸಮಾಧಿ ಮೇಲಿನ ರಾಜಕಾರಣ ಬೇಡ: ಪುಟ್ಟಣ್ಣಯ್ಯ ಆಕ್ರೋಶ

ಶುಕ್ರವಾರ, 3 ಜುಲೈ 2015 (14:10 IST)
ರಾಜ್ಯದಲ್ಲಿ ರೈತರು ಸಾಲಬಾಧೆಯಿಂದ ನರಳುತ್ತಿದ್ದು, ಆತ್ಮಹತ್ಯೆ ಸರಣಿ ಮುಂದುವರಿದಿದ್ದರೂ ಕೂಡ ಸರ್ಕಾರ ನೀರಸ ಮೌನ ಪ್ರದರ್ಶಿಸುತ್ತಿದ್ದು, ರೈತರ ಸಮಾಧಿ ಮೇಲೆ ರಾಜಕಾರಣ ಮಾಡುವುದನ್ನು ಸರ್ಕಾರ ಬಿಡಬೇಕು ಎಂದು ಮೇಲುಕೋಟೆ ಶಾಸಕ, ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಸರ್ಕಾರಕ್ಕೆ ಕಿವಿಮಾತನ್ನೇಳಿದ್ದಾರೆ. 
 
ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಅವರು, ಸರ್ಕಾರ ಕೃಷಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕಿದೆ. ಆಗ ಮಾತ್ರ ರೈತರ ಆತ್ಮಹತ್ಯೆ ನಿಲ್ಲಲಿದೆ ಎಂದ ಅವರು, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರ 15 ಸಾವಿರ ಕೋಟಿ ವಿಶೇಷ ತೆರಿಗೆ ಸಂಗ್ರಹ ಮಾಡಲಿ. ಅಲ್ಲದೆ ಹೆಚ್ಚು ಮಳೆ ಬೀಳುವ ಪ್ರದೇಶಗಳಿಗೆ ಹೆಚ್ಚಿನ ಅನುಧಾನ ಬಿಡುಗಡೆ ಮಾಡಲಿ. ಈ ಮೂಲಕ ಸರ್ಕಾರ ರೈತರ ಬಾಳನ್ನು ಹಸನುಗೊಳಿಸಲಿ ಎಂದ ಒತ್ತಾಯಿಸಿದರು. 
 
ಇದೇ ವೇಳೆ, ಪ್ರಸ್ತುತ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ ಸಾಲ ನೀತಿಗಳಿಗೆ ತಿದ್ದುಪಡಿ ತರುವ ಕೆಲಸ ಶೀಘ್ರವೇ ಆಗಲಿ ಎಂದ ಅವರು, ರೈತರ ಸಮಾಧಿ ಮೇಲೆ ರಾಜಕಾರಣ ಮಾಡುವುದನ್ನು ಸರ್ಕಾರ ಬಿಡಬೇಕು ಎಂದು ಒತ್ತಾಯಿಸಿದರು.  
 
ಕಬ್ಬು ಬೆಳೆಗಾರರು ತಮ್ಮ ಬಾಕಿ ಹಣ ನೀಡಲಿಲ್ಲ ಎಂಬ ಕಾರಣದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಆತ್ಮಹತ್ಯೆ ಸರಣಿ ಇನ್ನೂ ಮುಂದುವರಿದಿದ್ದು, ರಾಜ್ಯಾದ್ಯಂತ ಪ್ರಸ್ತುತದ ವರೆಗೆ 10 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪ್ರಕರಣಗಳೆಲ್ಲವೂ ಕೂಡ ಕೇವಲ 2 ತಿಂಗಳ ಒಳಗೆ ನಡೆದಿವೆ. ಆದರೂ ಕೂಡ ಸ್ರಕಾರ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಶಾಸಕರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ