ತುಚ್ಛ ಕೃತ್ಯ: ದಾನ ಮಾಡಿದ್ದ ಕಣ್ಣುಗಳು ಸೇರಿದ್ದು ಕಸದ ಬುಟ್ಟಿಗೆ

ಗುರುವಾರ, 26 ಮಾರ್ಚ್ 2015 (17:26 IST)
ಈ ನೀಚತನವನ್ನು ವಿವರಿಸಲು ಪದಗಳೇ ಸಿಗಲಿಕ್ಕಿಲ್ಲ. ಅಂತಹ ಕೃತ್ಯವೊಂದು ಹರಿಯಾಣಾದ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ತಾವು ಸತ್ತ ನಂತರ ತಮ್ಮ ಕಣ್ಣುಗಳು ಇನ್ನಿಬ್ಬರಿಗೆ ಜಗವ ನೋಡಲು ಅವಕಾಶ ನೀಡಲಿ ಎಂಬ ದೊಡ್ಡತನದಿಂದ ಉದಾರಿಗಳು ನೀಡಿದ ಕಣ್ಣುಗಳನ್ನು ಕಸದ ಬುಟ್ಟಿಗೆ ಎಸೆದಿರುವ ಆರೋಪಿಗಳು ತುಚ್ಛತನವನ್ನು ಮೆರೆದಿದ್ದಾರೆ. ಅದು ಸಹ ಒಂದೆರಡು ಕಣ್ಣುಗಳಲ್ಲ. ಬರೊಬ್ಬರಿ 2,000 ಕಣ್ಣುಗಳು. ಈ ಮೂಲಕ ಬೆಳಗಲಿದ್ದ 2,000 ಕಣ್ಣಿಲ್ಲದವರ ಬದುಕನ್ನು ಮತ್ತೆ ಕತ್ತಲಿನಲ್ಲಿ ಕೊಳೆಯುವಂತೆ ಮಾಡಿದ್ದಾರೆ. 

ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಸಂಸ್ಥೆ - ರೋಹಟಾಕ್‌ನಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ವಿಚಾರಣೆಗೆ ಆದೇಶಿಸಲಾಗಿದೆ.  ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ವಿಭಾಗದ ಕಾರ್ಯದರ್ಶಿ ಪ್ರದೀಪ್ ಕಾಸ್ನಿ ತನಿಖೆ ನಡೆಸಲಿದ್ದಾರೆ ಎಂದು ಹರಿಯಾಣಾದ ಆರೋಗ್ಯ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ. 
 
ದೇಶದ ಅತಿದೊಡ್ಡ ವೈದ್ಯಕೀಯ ಸಂಸ್ಥೆಗಳಾದ ದೆಹಲಿಯ ಅಖಿಲ ಭಾರತ  ವೈದ್ಯಕೀಯ ವಿಜ್ಞಾನಸಂಸ್ಥೆ (AIIMS),  ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ  ಮತ್ತು  ವೈದ್ಯಕೀಯ ವಿಜ್ಞಾನ ಸ್ನಾತಕೋತ್ತರ ಸಂಸ್ಥೆ - ರೋಹಟಾಕ್‌ನಲ್ಲಿ ದಾನ ಮಾಡಿದ ಕಣ್ಣುಗಳಿವು ಎಂದು ತಿಳಿದು ಬಂದಿದೆ. 
 
 ಹೊಣೆಗೇಡಿತನದ ಈ ಕೃತ್ಯದ ಕುರಿತು ಖೇದ ವ್ಯಕ್ತಪಡಿಸಿರುವ ವಿಜ್ ಸರಕಾರ ಕಣ್ಣು ದಾನವನ್ನು ಉತ್ತೇಜಿಸಲು ಬಯಸುತ್ತದೆ. ಆದರೆ ಇಂತಹ ಘಟನೆಗಳು ನಮ್ಮ ಧನಾತ್ಮಕ ಯೋಜನೆಗಳಿಗೆ ಅಡತಡೆ ಉಂಟು ಮಾಡುತ್ತವೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ