ಆರ್ ಎಸ್ ಎಸ್ ಇದೇ ಮೊದಲ ಬಾರಿಗೆಂಬಂತೆ ಸಂವಿಧಾನ ಶಿಲ್ಪಿಯಾಗಿರುವ ಹಾಗೂ ಭಾರತದ ಮಹಾನ್ ನಾಯಕರಲ್ಲಿ ಒಬ್ಬರಾಗಿರುವ ಡಾ| ಅಂಬೇಡ್ಕರ್ ಮೇಲೆ ನೇತ್ಯಾತ್ಮಕವಾಗಿ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.
ಆರ್ ಎಸ್ ಎಸ್ ಈ ತನಕ ತನ್ನ ಸಂಸ್ಥಾಪಕ ಕೆ ಬಿ ಹೆಡಗೇವಾರ್ ಮತ್ತು ರಾಮಜನ್ಮಭೂಮಿ ಆಂದೋಲನದ ಕುರಿತಾಗಿ ವಿಶೇಷ ಸಂಚಿಕೆಗಳನ್ನು ತಂದಿದೆ. ಆದರೆ ಸಂಗ್ರಹಯೋಗ್ಯ ಸಂಚಿಕೆಯೊಂದನ್ನು, ಅದೂ ದಲಿತ ನಾಯಕ ಡಾ| ಅಂಬೇಡ್ಕರ್ ಕುರಿತಾಗಿ, ಹೊರ ತರುತ್ತಿರುವುದು ಇದೇ ಮೊದಲಾಗಿದೆ.
ಭಾರತದ ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಘರ್ ವಾಪಸಿಯಂತಹ ಧಾರ್ಮಿಕ ಮತಾಂತರವನ್ನು ಬೆಂಬಲಿಸಿದ್ದರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಹೇಳಿಕೊಂಡಿದೆ.
ಮುಂದಿನ ಮಂಗಳವಾರ ಡಾ| ಅಂಬೇಡ್ಕರ್ ಅವರ 125ನೇ ಜನ್ಮದಿನೋತ್ಸವದ ಅಂಗವಾಗಿ ಆರ್‌ಎಸ್‌ಎಸ್ ಮುಖವಾಣಿಯಾಗಿರುವ "ದ ಆರ್ಗನೈಸರ್ ಮತ್ತು ಪಾಂಚಜನ್ಯ' ಹೊರತರಲಿರುವ ಸಂಗ್ರಹಯೋಗ್ಯ ಸಂಚಿಕೆಯಲ್ಲಿ ಡಾ| ಅಂಬೇಡ್ಕರ್ ಬಗ್ಗೆ ಅಷ್ಟೇನೂ ಗೊತ್ತಿಲ್ಲದ ಸಂಗತಿಗಳನ್ನು ಜನರಿಗೆ ತಿಳಿಸುವ ಪ್ರಯತ್ನ ನಡೆದಿದೆ.
200 ಪುಟಗಳ ಈ ಬಂಪರ್ ಪುಸ್ತಕದಲ್ಲಿ ಅಂಬೇಡ್ಕರ್ ಅವರು ಇಸ್ಲಾಮಿಕ್ ಆಕ್ರಮಣದ ಬಗ್ಗೆ, ಇಸ್ಲಾಂ ಮತಾಂತರದ ಬಗ್ಗೆ, ಕಮ್ಯುನಿಸಂ ಬಗ್ಗೆ ಹಾಗೂ ಸಂವಿಧಾನದ 307ನೇ ಪರಿಚ್ಛೇದದ ಬಗ್ಗೆ ಆಡಿದ್ದ ಮುಲಾಜಿಲ್ಲದೆ ಮಾತುಗಳನ್ನು ಸಂಗ್ರಹಿಸಿಕೊಡಲಾಗಿದೆ.